ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಗೆ ದುರ್ಬುದ್ಧಿ ಇರುವುದರಿಂದ ಅವರಿಗೆ ಜಗತ್ತಿನಲ್ಲಿ ಯಾರೂ ಬುದ್ದಿ ಹೇಳೋಕೆ ಆಗೊಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ದೆಹಲಿ ಬಾಂಬ್ ಸ್ಪೋಟಕ್ಕೆ ಕೇಂದ್ರದ ವೈಫಲ್ಯ ಕಾರಣ ಎಂದ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ದುರ್ಬುದ್ದಿ ಇರೋ ಜನರಿಗೆ ಜಗತ್ತಿನ ಯಾರೂ ಬುದ್ದಿ ಹೇಳೋಕೆ ಆಗೊಲ್ಲ.ಮೂರ್ಖನಿಗೆ, ದುರ್ಬುದ್ದಿ ಇರೋರಿಗೆ ಬುದ್ದಿ ಹೇಳಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅಹಮದಾಬಾದ್, ದೆಹಲಿ, ಹೈದರಾಬಾದ್‌ನಲ್ಲಿ ಬಾಂಬ್ ಸ್ಪೋಟದ ಸುದ್ದಿ ಆಗ್ತಾ ಇತ್ತು. ಆ ಸಂದರ್ಭದಲ್ಲಿ ಭಯೋತ್ಪಾದಕರ ಪರ ಸಿಂಪತಿ ಇರೋ ಸರ್ಕಾರ ಇತ್ತು. ಈಗ ಭಯೋತ್ಪಾದಕರ ಬಗ್ಗೆ ಸಿಂಪತಿ ಇಲ್ಲದ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಭಯೋತ್ಪಾದಕರನ್ನು ಯಾರನ್ನೂ ಉಳಿಸುವ ಪ್ರಶ್ನೆಯೇ ಇಲ್ಲ, ಉಳಿಸೋದು ಇಲ್ಲ ಎಂದು ತಿರುಗೇಟು ನೀಡಿದರು.
ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಉತ್ತರ ಕೊಡ್ತು. ಪುಲ್ವಾಮ ಘಟನೆಗೆ ಸರ್ಜಿಕಲ್ ಸ್ಟ್ರೈಕ್ ಉತ್ತರ ಕೊಟ್ಟಿದೆ. ಮುಂಬೈ ದಾಳಿ ಘಟನೆ ಆದಾಗ ಭಯೋತ್ಪಾದಕನಿಗೆ ಬಿರಿಯಾನಿ ಕೊಟ್ಟು ಸಾಕಿದ್ರಿ ಪ್ರಿಯಾಂಕ್ ಖರ್ಗೆ ಅವರೇ. ನಿಮ್ಮ ಹಾಗೇ ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಬಿಜೆಪಿ ಸಾಕಲ್ಲ.
ಕುಕ್ಕರ್‌ನಲ್ಲಿ ಬಾಂಬ್ ಇಟ್ಟವನನ್ನ ನಾಚಿಕೆ, ಮಾನ ಮರ್ಯಾದೆ ಬಿಟ್ಟು ಬ್ರದರ್ ಅಂದ್ರಿ. ಅಂತಹ ಸಂಬಂಧ ಹುಡುಕೋ ಕೆಲಸ ನಾವು ಮಾಡೊಲ್ಲ. ಭಯೋತ್ಪಾದಕರಲ್ಲೂ ಓಟಿನ ಸಂಬಂಧ ಹುಡುಕೋ ನೀಚ ಕೆಲಸ ಬಿಜೆಪಿ ಮಾಡಿಲ್ಲ, ಮಾಡೋದು ಇಲ್ಲ ಎಂದು ಕಿಡಿಕಾರಿದರು.
ಭಯೋತ್ಪಾದಕರ ಕೈಗೆ ಮೊಬೈಲ್ ಕೊಡುವ ದ್ರೋಹಿಗಳು ನಮಗೆ ಪಾಠ ಮಾಡೋ ಅವಶ್ಯಕತೆ ಇಲ್ಲ ಅಂತ ವಾಗ್ದಾಳಿ ನಡೆದರು.