ರಾಮನಗರ: ಚನ್ನಪಟ್ಟಣ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವಣಿ ಮತಬೇಟೆಗೆ ಇಳಿದಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತ್ಯೇಕವಾಗಿ ಹಳ್ಳಿ, ಹಳ್ಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿದ್ದಾರೆ.
ಸೋಮವಾರ ನಿಖಿಲ್ 15 ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದಾರೆ. ಚನ್ನಪಟ್ಟಣದ ಹೆಚ್.ಬ್ಯಾಡರಳ್ಳಿ, ಬೊಮ್ಮನಾಯಕನಹಳ್ಳಿ ಹಾಗೂ ಬೇವೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.
ಇದರೊಂದಿಗೆ ಪತ್ನಿ ರೇವತಿ ಕೂಡ ನಿಖಿಲ್ ಪರವಾಗಿ ಮತಬೇಟೆಗಿಳಿದಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಇಂದು ಬೆಳ್ಳಂ ಬೆಳಗ್ಗೆಯಿಂದಲೇ ಪತ್ನಿ ರೇವತಿ ಪ್ರಚಾರ ಶುರು ಮಾಡಿದ್ದಾರೆ. ಚನ್ನಪಟ್ಟಣದ ಮಹಿಳಾ ಕಾಲೇಜು ಮುಂಭಾಗ ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿ ನಿಖಿಲ್‌ಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ನಿಖಿಲ್ ಪತ್ನಿ ರೇವತಿ ಅವರಿಗೆ ಜೆಡಿಎಸ್ ಮಹಿಳಾ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಕೆಲವರು ರೇವತಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಇದೇ ವೇಳೆ ನಿಖಿಲ್ ಮಾತನಾಡಿ, ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ದೇವೇಗೌಡರು ಕಳೆದ 30 ವರ್ಷಗಳಿಂದ ಹಿಂದೆ ನಿರ್ಣಯ ಮಾಡಿ ಇಗ್ಗಲೂರು ಡ್ಯಾಂ ಮಾಡಿದ್ದರು. ಕೆಲವರು 17 ಕೆರೆ ತುಂಬಿಸಿದ್ದೇವೆ ಅಂತ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಸದಾನಂದಗೌಡರವರ ಕಾಲದಲ್ಲಿ ಆ ಕೆರೆಗಳನ್ನ ತುಂಬಿಸಿದ್ದು. ವಿ. ಸೋಮಣ್ಣ ಅವರು ಅನುದಾನ ಕೊಟ್ಟು ಕೆರೆಗಳಿಗೆ ಮರುಜೀವ ನೀಡಿದ್ದರು. ಕುಮಾರಸ್ವಾಮಿಯವರೂ ಸುಮಾರು 100ಕ್ಕೂ ಹೆಚ್ಚು ಕೆರೆಗಳನ್ನ ತುಂಬಿಸಿದ್ದಾರೆ ಎಂದು ಹೇಳಿದರು.