ಶಿಗ್ಗಾಂವಿ: ಹಗರಣ ಬಂದಾಗ ಸಿಎಂ ಸಿದ್ದರಾಮಯ್ಯನವರು ಎಂದೂ ಕಾಲಿಡದವರೂ ದೇವಾಲಯಗಳಿಗೆ ಹೋಗ್ತಾರೆ. ಅವರಿಗೂ ಗೊತ್ತಾಗಿದೆ ಕಷ್ಟ ಬಂದಾಗ ಕಾಪಾಡೋದಕ್ಕೆ ಹಿಂದೂ ದೇವರೇ ಆಗಬೇಕು ಅಂತ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ.
ಹಿಂದೆಲ್ಲಾ ಸಿದ್ದರಾಮಯ್ಯ ಮೈಸೂರು ದಸರಾಗೆ ಬಂದರೂ ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಕಾಲಿಡ್ತಾ ಇರಲಿಲ್ಲ. ಆದರೆ ಈಗ ಮುಡಾ ಹಗರಣ ಮೈಮೇಲೆ ಬಂದಾಗ ಎಂದೂ ಹೋಗದವರು ಚಾಮುಂಡೇಶ್ವರಿ ದೇವಾಲಯಕ್ಕೆ ಪದೇ ಪದೇ ಹೋದರು. ಹಾಸನದಲ್ಲಿ ಹಾಸನಾಂಬೆಯ ದೇವಾಲಯಕ್ಕೆ ತೆರಳಿ ಕಾಪಾಡಮ್ಮಾ ಎಂದು ಬೇಡಿಕೊಂಡರು.
ಯಾಕೆಂದರೆ ಅವರಿಗೂ ಗೊತ್ತಾಗಿದೆ. ಕಷ್ಟ ಬಂದಾಗ ಕಾಪಾಡಲು ಯಾವ ಮುಸ್ಲಿಂ ದೇವರು, ಕ್ರಿಶ್ಚಿಯನ್ ದೇವರು ಬರಲ್ಲ. ಹಿಂದೂ ದೇವರೇ ಬರಬೇಕು ಅಂತ ಎಂದು ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ. ಈ ವೇಳೆ ಜೊತೆಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಸಿಟಿ ರವಿ ಜೋರಾಗಿ ನಕ್ಕರು.
ವಕ್ಫ್ ಬೋರ್ಡ್ ನೋಟಿಸ್ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಭೂ ಸುಧಾರಣೆ ನೀತಿ ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂತು. ಅದರ ಪ್ರಕಾರ ಎಷ್ಟೋ ಹಿಂದೂ ದೇವಾಲಯಗಳ, ಶ್ರೀಮಂತ ಜಮೀನ್ದಾರರ ಆಸ್ತಿಗಳು ಉಳುಮೆ ಮಾಡುವವರಿಗೆ ಹೋಯಿತು. ಆದರೆ ಈ ಕಾಯಿದೆಯಲ್ಲಿ ವಕ್ಫ್ ಬೋರ್ಡ್ ನ್ನು ಯಾಕೆ ಬಿಟ್ಟರು? ನೀವೆಲ್ಲಾ ನಾನು ಗೌಡ, ನಾನು ಲಿಂಗಾಯತ, ನಾನು ಎಸ್ ಸಿ, ಎಸ್ ಟಿ ಎಂದು ಹೇಳುತ್ತಾ ಕೂರಬೇಡಿ. ನಮ್ಮ ಜಮೀನುಗಳನ್ನು ಉಳಿಸಿಕೊಳ್ಳಬೇಕಾದರೆ ನಾವೆಲ್ಲಾ ಹಿಂದೂಗಳು ಎಂದು ಹೋರಾಟ ಮಾಡಿ ಎಂದು ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.