Select Your Language

Notifications

webdunia
webdunia
webdunia
webdunia

ಇಎಸ್‌ಐ ನೇಮಕಾತಿಯಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಹೊಸ ತಿದ್ದುಪಡಿ ಅಧಿಸೂಚನೆ

ಇಎಸ್‌ಐ ನೇಮಕಾತಿಯಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಹೊಸ ತಿದ್ದುಪಡಿ ಅಧಿಸೂಚನೆ
bangalore , ಶುಕ್ರವಾರ, 21 ಜನವರಿ 2022 (21:12 IST)
ಕಾರ್ಮಿಕ ರಾಜ್ಯ ವಿಮಾ ನಿಗಮ (ಇ.ಎಸ್.ಐ.)ದ ನೇಮಕಾತಿಯಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ, ಹೊಸ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಕಾರ್ಮಿಕ ರಾಜ್ಯ ವಿಮಾ ನಿಗಮ (ಇ.ಎಸ್.ಐ.) ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಕನ್ನಡವನ್ನು ನಿರ್ಲಕ್ಷಿಸಿರುವ ಧೋರಣೆ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಆಕ್ರೋಶಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಜೊತೆ ಚರ್ಚಿಸಿ ಕೆಳ ಹಂತದ ಹುದ್ದೆಗಳಿಗೆ ಕರ್ನಾಟಕದಲ್ಲಿ ಹಿಂದಿ ಜತೆಗೆ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶವಾಗುವಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ವಿನಂತಿಸಿದ್ದರು. ಕಾರ್ಮಿಕರ ರಾಜ್ಯ ವಿಮಾ ನಿಗಮವು ಕಳೆದ ಡಿ. 27ರಂದು ಅಪ್ಪರ್ ಡಿವಿಷನ್ ಕ್ಲರ್ಕ್ ಸ್ಟೆನೋಗ್ರಾಫರ್ ಹಾಗೂ ಮಲ್ಟಿ ಟಾಸ್ಕ್ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಪ್ರಕಟಿಸಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸ್ವತಂತ್ರರಾಗಿದ್ದಾರೆ.
ಈ ವಿಷಯವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಸಹ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಕೇಂದ್ರ ರೂಪಿಸಿರುವ ನೇಮಕಾತಿ ನಿಯಮದಲ್ಲಿ ಬದಲಾವಣೆ ತರಲು ಪ್ರಯತ್ನಿಸುವಂತೆ ಕೋರಿದ್ದರು. ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಕೆಳಹಂತದ ಹುದ್ದೆಗಳಿಗೂ ಅಂದರೆ ಮಲ್ಟಿ ಟಾಸ್ಕ್ (ಎಂಟಿಎಸ್) ಅಂದರೆ ಆಫೀಸ್ ಬಾಯ್ ಕೆಲಸ, ಅದಕ್ಕೂ ಇಂಗ್ಲಿಷ್ ಅಥವಾ ಹಿಂದಿಯಲ್ಲೇ ಎರಡು ಹಂತದ ಪರೀಕ್ಷೆಯಲ್ಲಿ ಉತ್ತರಿಸಿ ಕೆಲಸ ಗಿಟ್ಟಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಈ ಹುದ್ದೆಗಳಿಗೆ ಪರೀಕ್ಷೆ ಎದುರಿಸಲು ಅನುಕೂಲವಾಗುವಂತೆ ಕನ್ನಡವನ್ನು ಪರಿಗಣಿಸುವಂತೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾಧವ್‌ ಅವರೊಂದಿಗೆ ಚರ್ಚಿಸಿದ್ದೆ ಎಂದು ಹೇಳಿರುವ ಜೋಶಿ, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಯಾಧವ್ ಅವರು, ಆಗಿರುವ ಅನ್ಯಾಯವನ್ನು ಸರಿಪಡಿಸುವ ಭರವಸೆ ನೀಡಿದ್ದರು. ಸರೋಜಿನಿ ಮಹಿಷಿ ವರದಿ ಪ್ರಕಾರ ಕೇಂದ್ರ ಸರಕಾರದ ಉದ್ದಿಮೆಗಳಲ್ಲಿಯೂ ಕನ್ನಡಿಗರಿಗೆ ಮೀಸಲಾತಿ ಇರಬೇಕೆಂಬ ಶಿಫಾರಸು ಇದೆ. ಅದರ ಆಧಾರದಲ್ಲಿಯೇ ಈ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
ಈಗಿನ ನಿಗಮವು ಹೊರಡಿಸಿರುವ ತಿದ್ದುಪಡಿ ಅಧಿಸೂಚನೆಯಿಂದ ಕನ್ನಡಿಗರಿಗಾದ ಅನ್ಯಾಯವನ್ನು ಸರಿಪಡಿಸಿದಂತಾಗಿದೆಯೆಂದು ಸಚಿವ ಜೋಶಿ ತಿಳಿಸಿದ್ದಾರೆ. ಇದರಿಂದ ಎಂ.ಟಿ.ಎಸ್. ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯಲ್ಲಿ ಭಾಷಾ ಮಾಧ್ಯಮದಲ್ಲಿ ಬದಲಾವಣೆ ಮಾಡಿ ಆಯಾ ವಲಯಗಳಲ್ಲಿ ಹಿಂದಿ ಜೊತೆಗೆ ಇತರ ಪ್ರಾದೇಶಿಕ ಭಾಷೆಗಳಿಗೂ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಅವರಿಗೆ ಧನ್ಯವಾದಗಳನ್ನು ಸಚಿವ ಜೋಶಿ ಅರ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭ: ಸಚಿವ ಬಿ ಸಿ ನಾಗೇಶ್