ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ವೀಕೆಂಡ್ ಕರ್ಪ್ಯೂವನ್ನು ರದ್ದುಗೊಳಿಸಲಾಗಿದ್ದು, ಇದರ ಜೊತೆಗೆ ರಾಜ್ಯಾದ್ಯಂತ ಶಾಲಾ-ಕಾಲೇಜು ನಡೆಯಲಿವೆ ಎಂದು ನಿರ್ಧಾರ ಕೈಗೊಳ್ಳಲಾಗಿದೆ.
ಕೋವಿಡ್ ತಜ್ಞರ ಜೊತೆ ಸಿಎಂ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, ಬೆಂಗಳೂರಿನಲ್ಲಿ ಶಾಲೆಗಳ ಆರಂಭ ಕುರಿತು ಮುಂದಿನ ವಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಬಿಟ್ಟು ಶಾಲಾ ಕಾಲೇಜು ಇನ್ನುಳಿದ ಎಲ್ಲಾ ಕಡೆಯಲ್ಲಿ ಇದೆ. ಪಾಸಿಟಿವಿಟಿ ದರ ಆಧರಿಸಿ ಶಾಲೆಗಳನ್ನು ಬಂದ್ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವ ಕಾರಣದಿಂದಾಗಿ ಶಾಲೆಗಳಿಗೆ ರಜೆ ಮುಂದುವರೆಯಲಿದೆ. ಜ.29ರವರೆಗೆ ಶಾಲೆಗಳನ್ನ ಮುಚ್ಚುವ ನಿರ್ಧಾರ ಮುಂದುವರೆಯಲಿದೆ.
ಎಲ್ಲಿಯಾದರೂ ಪಾಸಿಟಿವ್ ಬಂದರೆ ಆ ಶಾಲೆ ಮಾತ್ರ ಬಂದ್ ಮಾಡಬೇಕು, ಹೆಚ್ಚು ಪಾಸಿಟಿವ್ ಬಂದರೆ 7 ದಿನ, ಕಡಿಮೆ ಬಂದರೆ ಮೂರು ದಿನ ಶಾಲೆಗಳನ್ನ ಬಂದ್ ಮಾಡಿ ನಂತರ ಶಾಲೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.
6 ರಿಂದ15 ವರ್ಷದ ಮಕ್ಕಳಿಗೆ ಪಾಸಿಟಿವಿಟಿ ದರ ಕಡಿಮೆ ಇರುವುದರಿಂದ ಈಗ ಇರುವ ರೀತಿಯಲ್ಲೇ ಶಾಲೆಗಳನ್ನ ನಡೆಸಲಾಗುತ್ತದೆ. ನಾಲ್ಕೈದು ಜಿಲ್ಲೆಗಳಲ್ಲಿ ನಿರ್ಬಂಧ ಇತ್ತು. ಅಲ್ಲಿಯೂ ಕೂಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಅಲ್ಲಿಯೂ ಪುನರ್ ಪರಿಶೀಲಿಸಿ ಬಂದ್ ಅಗತ್ಯ ಇಲ್ಲ ಎನ್ನುವ ಕಡೆ ಶಾಲೆಗಳನ್ನು ತೆರೆಯಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.