ಮಲೆನಾಡಿನ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಪೋಲಿಸ್ ಇಲಾಖೆಗೆ ತಲೆನೋವಾಗಿದ್ದ ನಕ್ಸಲ್ ಚಟುವಟಿಕೆ ಇನ್ನೇನು ಕೊನೆ ಹಂತಕ್ಕೆ ಬಂದಿರುವ ಲಕ್ಷಣಗಳು ಕಾಣುತ್ತಿವೆ. ಮೊನ್ನೆ ಮೊನ್ನೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣ ಮೂರ್ತಿ ಸೇರಿದಂತೆ ಇಬ್ಬರು ಪೋಲಿಸರ ವಶವಾದ ಬೆನ್ನಲ್ಲೇ ನಕ್ಸಲ್ ಚಟುವಟಿಕೆಗಳ ಮೂಲಕ ಪಶ್ಚಿಮಘಟ್ಟಗಳಲ್ಲಿ ಗುರುತಿಸಿಕೊಂಡಿದ್ದ ಹೊಸಗದ್ದೆ ಪ್ರಭಾ ಇಂದು ತಮಿಳುನಾಡಿನ ವೆಲ್ಲೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ಪ್ರಭಾ ಅಲಿಯಾಸ್ ಹೊಸಗದ್ದೆ ಪ್ರಭಾ ಅಲಿಯಾಸ್ ಸಂಧ್ಯಾ ಅಲಿಯಾಸ್ ವಿಂಧು ಅಲಿಯಾಸ್ ನೇತ್ರಾ ಅಲಿಯಾಸ್ ಮಧು ಮುಂತಾದ ಹೆಸರುಗಳಿಂದ ಪ್ರಭಾ ಅವರನ್ನು ಕರೆಯಲಾಗುತ್ತಿತ್ತು.
2010 ರಲ್ಲಿ ಹೊಸಗದ್ದೆ ಪ್ರಭಾ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದ್ದರೂ ಅದು ದೃಢಪಟ್ಟಿರಲಿಲ್ಲ. ರಾಜ್ಯ ಸರ್ಕಾರ ಹೊಸಗದ್ದೆ ಪ್ರಭ ಪತ್ತೆ ಗಾಗಿ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಇದೀಗ ನಕ್ಸಲ್ ಇತಿಹಾಸದಲ್ಲಿ ಭಾರೀ ಹೆಸರು ಗಳಿಸಿದ್ದವರೆಲ್ಲರೂ ಪೋಲಿಸರಿಗೆ ಶರಣಾಗುತ್ತಿದ್ದರೆ ಕೆಲವರು ಪೋಲಿಸರ ವಶವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಳೆಗುಂದುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.