ಮನೆ ಮುಂದೆ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಭಾಗಶಃ ಹಾನಿಯಾಗಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಂದಿನಿ ಲೇಔಟ್‍ನ ಜೈ ಮಾರುತಿ ನಗರದ 4ನೆ ಕ್ರಾಸ್ ನಿವಾಸಿಯೊಬ್ಬರು ತಮ್ಮ ಮಾರುತಿ ಓಮ್ನಿ ಕಾರನ್ನು ಚಾಲನೆ ಮಾಡಿಕೊಂಡು ರಾತ್ರಿ 11 ಗಂಟೆ ಸುಮಾರಿನಲ್ಲಿ ಮನೆಗೆ ಬಂದಿದ್ದಾರೆ.ಮನೆ ಮುಂದೆ ಕಾರು ನಿಲ್ಲಿಸಿ ಒಳಗೆ ಹೋದ 10 ನಿಮಿಷದಲ್ಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ನೆರೆಹೊರೆಯವರು ಗಮನಿಸಿ ತಕ್ಷಣ ಕಾರು ಮಾಲೀಕರಿಗೂ ತಿಳಿಸಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರು.
ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನಿಲ ಸೋರಿಕೆಯಿಂದಲೋ ಇಲ್ಲವೆ ಬ್ಯಾಟರಿ ಕಿಡಿಯಿಂದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರ ಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ಕೈಗೊಂಡಿದ್ದಾರೆ.