ನವದೆಹಲಿ: ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರ ಈಗ ಸಂಸತ್ ಅಂಗಳಕ್ಕೆ ತಲುಪಿದೆ. ಮೆಟ್ರೊ ದರ ಇಳಿಕೆಗೆ ಯಾರು ಮುಂದಾಗಬೇಕು ಎಂಬ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ಮೆಟ್ರೊ ಟಿಕೆಟ್ ದರವನ್ನು ಏಕಾಏಕಿ ದುಪ್ಪಟ್ಟು ಮಾಡಲಾಗಿದ್ದು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗೊಳಗಾಗಿದೆ. ಜನ ಈಗ ಮೆಟ್ರೋ ಹತ್ತಲೂ ಹಿಂಜರಿಯುವಂತಾಗಿದೆ. ಈ ವಿಚಾರವನ್ನು ನಿನ್ನೆ ಸಂಸದ ತೇಜಸ್ವಿ ಸೂರ್ಯ ಸಂಸತ್ ನಲ್ಲಿ ಪ್ರಸ್ತಾಪಿಸಿದ್ದರು.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಿರುವ ದರ ಪರಿಷ್ಕರಣೆಯನ್ನು ಮೆಟ್ರೋ ನಿಯಮಗಳಲ್ಲಿ ಬದಲಾವಣೆಗೆ ಅವಕಾಶವಿಲ್ಲ. ಕೋರ್ಟ್ ಗೆ ಹೋಗಬೇಕಾಗುತ್ತದೆ. ಆದರೆ ಈ ವಿಚಾರವಾಗಿ ಕೋರ್ಟ್ ಮಧ್ಯಪ್ರವೇಶಿಸುತ್ತದೆಯೇ ಎಂಬುದೂ ಸ್ಪಷ್ಟವಿಲ್ಲ.
ಹೀಗಾಗಿ ಮತ್ತೊಮ್ಮೆ ರಾಜ್ಯ ಸರ್ಕಾರ ದರ ಪರಿಷ್ಕರಣೆ ಕುರಿತು ಮರುಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಬೇಕು. ಇದರಿಂದ ಮಾತ್ರ ದರ ಇಳಿಕೆ ಮಾಡಲು ಸಾಧ್ಯ. ಇದಕ್ಕೆ ಸಿಎಂ ಮನಸ್ಸು ಮಾಡಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.