ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿರುವುದರ ಬಗ್ಗೆ ರಾಜ್ಯ ರಾಜಧಾನಿಯಲ್ಲಿ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಮೊದಲು ನಮ್ಮ ಮೆಟ್ರೊ, ಈಗ ದುಡ್ಡು ಜಾಸ್ತಿ ಇದ್ರೆ ಮುಟ್ರೊ ಎಂಬ ಪೋಸ್ಟ್ ಒಂದು ವೈರಲ್ ಆಗಿದೆ.
ಏಕಾಏಕಿ ಮೆಟ್ರೊ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿರುವುದು ಪ್ರಯಾಣಿಕರನ್ನು ಕಂಗಾಲು ಮಾಡಿದೆ. ಹಲವರು ನಮಗೆ ಮೆಟ್ರೊ ಸಹವಾಸವೇ ಬೇಡ ಎಂದು ಬಸ್, ಸ್ವಂತ ವಾಹನ ಇಲ್ಲವೇ ಕ್ಯಾಬ್ ಮೊರೆ ಹೋಗಿದ್ದಾರೆ.
ಈ ನಡುವೆ ರಾಜ್ಯ ಸರ್ಕಾರ ಮತ್ತು ವಿಪಕ್ಷ ಬಿಜೆಪಿ ನಡುವೆ ಮೆಟ್ರೊ ದರ ಏರಿಕೆಗೆ ಕಾರಣ ಯಾರು ಎಂದು ಕ್ರೆಡಿಟ್ ಸಮರ ನಡೆಯುತ್ತಿದೆ. ಸಂಸದ ತೇಜಸ್ವಿ ಯಾದವ್ ಸಂಸತ್ ನಲ್ಲೂ ಮೆಟ್ರೊ ಪ್ರಯಾಣ ದರ ಏರಿಕೆ ಕುರಿತು ಪ್ರಸ್ತಾಪಿಸಿ ದರ ಇಳಿಕೆ ಮಾಡುವಂತೆ ಆಗ್ರಹಿಸಿದ್ದಾರೆ.
ಮೆಟ್ರೊ ಪ್ರಯಾಣ ದರವನ್ನೇ ಮುಂದಿಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಈಗ ಹಲವು ಫನ್ನಿ ಪೋಸ್ಟ್ ಗಳು ಹುಟ್ಟಿಕೊಂಡಿವೆ. ಆ ಪೈಕಿ ನಮ್ಮ ಮೆಟ್ರೋ, ದುಡ್ಡು ಜಾಸ್ತಿ ಇದ್ರೆ ಮುಟ್ರೋ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಕ್ರಿಯೇಟಿವಿಟಿ ಮೆಚ್ಚಲೇಬೇಕು ಎಂದು ನೆಟ್ಟಿಗರು ಕೊಂಡಾಡಿದ್ದಾರೆ.