ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರವನ್ನು ಶೇ 45-46 ರಷ್ಟು ಹೆಚ್ಚಳ ಮಾಡುವ ಮೂಲಕ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು ಶಾಕ್ ನೀಡಿತ್ತು. ಅದರ ಪರಿಣಾಮವಾಗಿ ಇದೀಗ ಪ್ರಯಾಣಿಕರು ನಮ್ಮ ಮೆಟ್ರೊ ಹತ್ತಲು ಹಿಂದೇಟು ಹಾಕುತ್ತಿದ್ಧಾರೆ. ಹೀಗಾಗಿ, ಬೆಲೆ ಏರಿಕೆಯಾದ ಬಳಿಕ ಪ್ರಯಾಣಿಕ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಎಂಟು ವರ್ಷಗಳ ಬಳಿಕ ಮೆಟ್ರೊ ದರವನ್ನು ಹೆಚ್ಚಳ ಮಾಡಲಾಗಿದೆ. ರಿಯಾಯಿತಿ ರಹಿತ ದರದಲ್ಲಿ ಸರಾಸರಿ ಶೇ 51.55ರಷ್ಟು ಹಾಗೂ ರಿಯಾಯಿತಿ ಸಹಿತ ದರದಲ್ಲಿ ಶೇ 45-46 ರಷ್ಟು ಏರಿಕೆ ಮಾಡಿದ್ದು, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದರೂ ದರ ಇಳಿಕೆ ಮಾಡುವ ಲಕ್ಷಣಗಳು ಕಾಣಿಸುತ್ತಿಲ್ಲ.
ಹೊಸ ಪ್ರಯಾಣ ದರ ಇದೇ 9ರಿಂದ ಅನ್ವಯವಾಗಿದೆ. ನಂತರದ ಸತತ ಎರಡು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಕುಸಿದಿದೆ. ಜನವರಿಯಲ್ಲಿ ಹಲವು ದಿನಗಳಲ್ಲಿ 10 ಲಕ್ಷ, 9 ಲಕ್ಷ ಪ್ರಯಾಣಿಕರು ಮೆಟ್ರೊ ಬಳಸಿದ್ದರು. ಆದರೆ, ಫೆಬ್ರುವರಿ 10ರಂದು ₹8.28 ಲಕ್ಷ ಹಾಗೂ 11ರಂದು 7.78 ಲಕ್ಷ ಜನರು ಮೆಟ್ರೊದಲ್ಲಿ ಸಾಗಿದ್ದಾರೆ.
ದರ ಏರಿಕೆಯ ಬಿಸಿಯ ಬಳಿಕ ಬೆಂಗಳೂರು ಮೆಟ್ರೊ ರೈಲು ನಿಗಮನಿತ್ಯ ₹60 ಲಕ್ಷ ಅಧಿಕ ಲಾಭದ ನಿರೀಕ್ಷೆಯಲ್ಲಿದೆ. ಆದರೆ, ಮತ್ತೊಂದೆಡೆ ಪ್ರಯಾಣಿಕ ಸಂಖ್ಯೆಯು ಕುಸಿಯುವ ಆತಂಕ ಮೂಡಿದೆ.