ಬೆಂಗಳೂರು: ಸರ್ಕಾರಿ ಶಿಕ್ಷಕರ ವೇತನ ವಿಳಂಬದ ಬಗ್ಗೆ ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು ಕೊಡೋದೇ ಕಡಿಮೆ ಸಂಬಳ, ಅದನ್ನೂ ತಡೆ ಹಿಡಿದರೆ ಹೇಗೆ ಎಂದಿದ್ದಾರೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಬಂದಿಲ್ಲ ಎಂಬ ಆಕ್ರೋಶದ ಮಧ್ಯೆ ಶಿಕ್ಷಕರೂ ವೇತನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ವಿಪಕ್ಷಗಳೂ ಟೀಕೆ ಮಾಡುತ್ತಿವೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎನ್ನುತ್ತಿದ್ದಾರೆ.
ಈ ನಡುವೆ ಇಂದು ಮಾಧ್ಯಮಗಳಿಗೆ ಶಿಕ್ಷಕರ ವೇತನದ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ಶಿಕ್ಷಕರಿಗೆ ಕೊಡೋದೇ ಕಡಿಮೆ ಸಂಬಳ. ಅದನ್ನೂ ತಡೆ ಹಿಡಿದರೆ ಹೇಗೆ? ಖಂಡಿತಾ ಕೊಡ್ತೀವಿ. ಕೆಲವು ಕಡೆ ಆಗಿದೆ. ಕೆಲವು ಕಡೆ ಬಾಕಿಯಿದೆ. ಬಾಕಿ ಇರೋದನ್ನೆಲ್ಲಾ ಕೊಡ್ತೇವೆ ಎಂದಿದ್ದಾರೆ.
ಇನ್ನು, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಾಕಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಶಿಕ್ಷಕರ ವೇತನನೂ ಕೊಡ್ತೀವಿ, ಗ್ಯಾರಂಟಿ ಹಣ ಬಾಕಿಯಿರುವುದನ್ನೂ ಕೊಡ್ತೇವೆ. ಯಾವುದನ್ನೂ ಬಾಕಿ ಇಡಲ್ಲ ಎಂದು ಭರವಸೆ ನೀಡಿದ್ದಾರೆ.