ಬೆಂಗಳೂರು: ರಾಜ್ಯದಲ್ಲಿ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ವಿವಾದದ ಬಗ್ಗೆ ಮಾತನಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದ್ದಾರೆ. ಅದಕ್ಕೆ ಒಂದು ನೆಪವನ್ನೂ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಪತ್ರಕರ್ತರೊಬ್ಬರು ರಾಜ್ಯದಲ್ಲಿ ವಕ್ಫ್ ವಿವಾದ ಜೋರಾಗಿದೆ. ಈ ಬಗ್ಗೆ ನೀವು ಏನು ಹೇಳ್ತೀರಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಲು ನಿರಾಕರಿಸಿದ್ದಾರೆ. ಇದಕ್ಕೆ ನಾನು ಕಾಮೆಂಟ್ ಮಾಡುವಂತಿಲ್ಲ ಎಂದಿದ್ದಾರೆ.
ಅದನ್ನು ನೋಡಿಕೊಳ್ಳಲು ಜಂಟಿ ಸದನ ಸಮಿತಿ ರಚನೆಯಾಗಿದೆ. ನಾನು ಒಬ್ಬ ರಾಜ್ಯ ಸಭೆ ಸದಸ್ಯನಾಗಿ ಅದರ ಬಗ್ಗೆ ಏನೂ ಹೇಳಲ್ಲ. ನಮ್ಮ ಅಭಿಪ್ರಾಯ ಹೇಳಲು ಜಂಟಿ ಸದನ ಸಮಿತಿಯಿದೆ. ಅದರ ವರದಿ ಬಂದ ಮೇಲೆ ನಮ್ಮ ಅಭಿಪ್ರಾಯ ಹೇಳಲಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇನ್ನು ಇವಿಎಂ ಬಗ್ಗೆ ಇರುವ ತಕರಾರು ಬಗ್ಗೆ ಕೇಳಿದಾಗ ನಾನು ಈಗ ಅದರ ಬಗ್ಗೆ ಪದೇ ಪದೇ ಏನೂ ಹೇಳಲ್ಲ. ನಮ್ಮದೊಂದು ಕಮಿಟಿ ಇದೆ, ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಮುಂತಾದವರು ಅದರ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಎಂದು ಖರ್ಗೆ ಹೇಳಿದ್ದಾರೆ.