ಸಂಡೂರು: ಈ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅನ್ನಪೂರ್ಣ ತುಕರಾಂ ಪರ ಪ್ರಚಾರ ಮಾಡಲು ಸಿಎಂ ಸಿದ್ದರಾಮಯ್ಯ ಬಂದಿದ್ದರು. ಆದರೆ ಸಿಎಂ ಸಮಾವೇಶಕ್ಕೆ ಜನ ಸೇರಿಸಲು ತಲಾ 300 ರೂ. ಹಣ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಿಎಂ ಸಿದ್ದರಾಮಯ್ಯ ಸಮಾವೇಶದಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದರು. ಆದರೆ ಈ ಸಮಾವೇಶಕ್ಕೆ ಬಂದವರಿಗೆ ಟೋಕನ್ ನೀಡಲಾಗಿತ್ತು. ಈ ಟೋಕನ್ ನೀಡಿದವರಿಗೆ 300 ರೂ. ಭಕ್ಷೀಸು ನೀಡಲಾಗಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆ ಸಂಡೂರಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ದರು. ಈ ಸಮಾವೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರೂ ಭಾಗಿಯಾಗಿದ್ದರು. ಆದರೆ ಈ ಮಹಿಳೆಯರಿಗೆ ಹಣ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಮಗೆ 300 ರೂ. ಕೊಡುವುದಾಗಿ ಹೇಳಿದ್ದರು ಎಂದು ಮಹಿಳೆಯರು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಬಳ್ಳಾರಿಯ ಸಂಡೂರಿನಲ್ಲಿ ಸಂಸದ ಇ ತುಕರಾಂ ಪತ್ನಿ ಅನ್ನಪೂರ್ಣ ತುಕರಾಂ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ಮೋದಿಯವರು ಗೃಹಲಕ್ಷ್ಮಿಯ ಯೋಜನೆ ಬಗ್ಗೆ ಸುಳ್ಳು ಹೇಳಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.