Select Your Language

Notifications

webdunia
webdunia
webdunia
webdunia

ರಾಜ್ಯಾದ್ಯಂತ ಕಾಂಗ್ರೆಸ್ ವಕ್ಫ್ ಜಿಹಾದಿ ನಡೆಸುತ್ತಿದೆ: ಪ್ರಲ್ಹಾದ್ ಜೋಶಿ ಆರೋಪ

Pralhad Joshi

Krishnaveni K

ಬೆಂಗಳೂರು , ಶುಕ್ರವಾರ, 8 ನವೆಂಬರ್ 2024 (14:57 IST)
ಬೆಂಗಳೂರು: ರಾಜ್ಯಾದ್ಯಂತ ವಕ್ಫ್ ಮೂಲಕ ಹೊಸ ಜಿಹಾದಿ ನಡೆದಿದೆ. ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ಸಿಗರ ನಡೆನುಡಿ ನೋಡಿದರೆ, ಇವರ ದುರುಳತನ ಅರ್ಥವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.

ಮಾಧ್ಯಮ ಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಾಂಗ್ರೆಸ್ಸಿಗರನ್ನು ಹುಂಬರು, ತಿಳಿವಳಿಕೆ ಇಲ್ಲದವರು ಎಂದು ಕರೆಯಲು ನಾನು ತಯಾರಿಲ್ಲ. ಅವರೇನು ಮಾತನಾಡುತ್ತಾರೆಂದು ಅವರಿಗೆ ಗೊತ್ತಿದೆ ಎಂದು ತಿಳಿಸಿದರು. ವಕ್ಫ್ ಆಸ್ತಿ ಸಂರಕ್ಷಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ್ದಾಗಿ ತಿಳಿಸಿದ್ದಾರೆ. ಇದ್ದ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ಸಿನ ಹಿರಿಯ ನಾಯಕರು ಲೂಟಿ ಮಾಡಿದ್ದರು. ಬಾಡಿಗೆ, ಲೀಸ್ ಮೂಲಕ ಸಾವಿರಾರು ಕೋಟಿ ಹಣ ಪಡೆಯುತ್ತಿದ್ದರು. ಇರುವ ವಕ್ಫ್ ಆಸ್ತಿ ಸಂರಕ್ಷಿಸುವುದಾಗಿ ನಾವು ಹೇಳಿದ್ದೆವು. ಈಗ ವಕ್ಫ್ ಛೂ ಬಿಟ್ಟಿದ್ದಾರೆ; ನೂರಾರು ವರ್ಷಗಳ ಮಂದಿರ, ಮಠ ಹೊಡೆಯಲು ಮುಂದಾಗಿದ್ದಾರೆ. ವಿಜಯಪುರ ಜಿಲ್ಲೆಯ ಪಡಗಾನೂರು ಗ್ರಾಮದಲ್ಲಿ ಚಾಲುಕ್ಯರು ಕಟ್ಟಿದ 1500 ವರ್ಷಗಳ ಹಿಂದಿನ ದೇವಸ್ಥಾನ ವಕ್ಫ್ ಎಂದು ಘೋಷಿಸಿದ್ದಾರೆ ಎಂದು ಆರೋಪಿಸಿದರು.

ಕೇವಲ ಕಾಲಂ ನಂಬರ್ 11ರಲ್ಲಿ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಕೇಳಿದರೆ ಸಮರ್ಪಕ ಉತ್ತರ ಸಿಗಲಿಲ್ಲ ಎಂದು ಆಕ್ಷೇಪಿಸಿದರು. ಸೇಲ್ ಡೀಡ್ ಇಲ್ಲದೆ ವಕ್ಫ್ ಷಡ್ಯಂತ್ರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದೆ. ಫಾರೂಕ್ ಅಬ್ದುಲ್ಲ ಭಯೋತ್ಪಾದಕರನ್ನು ಕೊಲ್ಲಬಾರದು ಎನ್ನುತ್ತಿದ್ದಾರೆ. ಪಾಕ್ ಜೊತೆ ಮಾತುಕತೆ ಮಾಡಲು ಕೋರುತ್ತಾರೆ. ಅವರ ಜೊತೆ ಇಂಡಿ ಒಕ್ಕೂಟ ಇದೆ. ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಭ್ರಮಣೆ ಆಗಿದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ತುಷ್ಟೀಕರಣದ ಈ ನೀತಿಯನ್ನು ವಿರೋಧಿಸುತ್ತೇನೆ; ಕಾಂಗ್ರೆಸ್ ಇಲ್ಲಿ ಗೆದ್ದರೆ ನಿಮ್ಮ ಮನೆಗಳನ್ನೂ ವಕ್ಫ್ ಆಸ್ತಿ ಎನ್ನಬಹುದು ಎಂದು ಎಚ್ಚರಿಸಿದರು.
 
ಮುಸಲ್ಮಾನರ ತುಷ್ಟೀಕರಣವೇ ಕಾಂಗ್ರೆಸ್ ಧ್ಯೇಯ

ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರು ಅರ್ಥಾತ್ ಮುಸಲ್ಮಾನರ ತುಷ್ಟೀಕರಣವನ್ನೇ ಧ್ಯೇಯವನ್ನಾಗಿ ಮಾಡಿಕೊಂಡಿದೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯನವರು ಮೊದಲನೇ ಅವಧಿಯಲ್ಲಿ 2013-18ರಲ್ಲಿ ನಿರ್ಬಂಧಿತ ಪಿಎಫ್‍ಐ, ಎಸ್‍ಡಿಪಿಐ, ಕೆಎಫ್‍ಡಿ ಸಿಮಿಯ ಪೂರ್ವಾವತಾರವಾದ 175 ಕೇಸುಗಳನ್ನು ವಾಪಸ್ ಪಡೆದಿದ್ದರು. ಬಳಿಕ ಈಚೆಗೆ ಅನೇಕ ಬಾರಿ ಹಿಂದೂ ಸಂಘಟನೆಗಳು, ಮಂದಿರಗಳ ಮೇಲೆ ದಾಳಿ ಆಗಿದೆ. ಆದರೆ, ಕಾಂಗ್ರೆಸ್ಸಿಗರಿಗೆ ಏನೂ ಅನಿಸುತ್ತಿಲ್ಲ. ಸೌಮ್ಯವಾಗಿ ಅವರನ್ನು ನೋಡಿಕೊಂಡಿದ್ದರು ಎಂದು ಪ್ರಲ್ಹಾದ್ ಜೋಶಿ ಅವರು ಟೀಕಿಸಿದರು.
 
ಕೇವಲ ತುಷ್ಟೀಕರಣದ ಆಧಾರದಲ್ಲಿ ಚುನಾವಣೆ ಮಾಡಲು ಹೊರಟಿದ್ದಾರೆ. ತುಷ್ಟೀಕರಣದ ಪರಾಕಾಷ್ಠೆ ಕಾಂಗ್ರೆಸ್ಸಿನದು. ಈ ಬಾರಿ ಕಾಂಗ್ರೆಸ್ಸಿಗೆ ಶಾಕ್ ಕೊಟ್ಟರೆ, ಅನ್ಯಾಯಕ್ಕೆ ಒಳಗಾದ ಹಿಂದೂಗಳೂ ಜಾಗೃತರಾಗಿದ್ದಾರೆ ಎಂಬ ಸಂದೇಶ ಸಿಗಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಮತದಾರರು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ನಾನು ಹೋರಾಟ ಮಾಡುತ್ತಿದ್ದೇನೆ; ಬಿಜೆಪಿಯವರನ್ನು ಟೀಕಿಸುವ ಕಾರಣ ನನ್ನನ್ನು ಕೇಸಿನಲ್ಲಿ ಸಿಲುಕಿಸಿ ಹಾಕಿದ್ದಾರೆಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಜನರಿಗೆ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಹೇಗೆ ನಿಸ್ಸೀಮರು ಎಂಬುದು ಇದರಿಂದ ಅರ್ಥ ಆಗುತ್ತದೆ ಎಂದು ವಿಶ್ಲೇಷಿಸಿದರು. ರಾಜ್ಯಪಾಲರು ತಮ್ಮ ಸಂಪೂರ್ಣ ವಿವೇಚನೆ ಬಳಸಿ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟರು. ಕೋರ್ಟಿಗೆ ಹೋದವರು ಯಾರು ಮಿಸ್ಟರ್ ಸಿದ್ದರಾಮಯ್ಯ ಎಂದು ಪ್ರಶ್ನಿಸಿದರು. ನಿಮ್ಮ ಪ್ರಭಾವ ಇಲ್ಲದೆ ಇದಾಗಲು ಸಾಧ್ಯವಿಲ್ಲ ಎಂದು ಹೈಕೋರ್ಟೇ ಹೇಳಿದೆ. ಇವತ್ತಿನವರೆಗೆ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ಇಲ್ಲ ಎಂದು ವಿವರಿಸಿದರು.
ಸಂವಿಧಾನ ತೆಗೆದುಕೊಂಡು ಓಡಾಡುವ ದರಿದ್ರ ಕಾಂಗ್ರೆಸ್ಸಿಗರು ನಿನ್ನೆ ಖಾಲಿ ಹಾಳೆಯ ಸಂವಿಧಾನದ ಪ್ರತಿ ಹಂಚಿದ್ದಾರೆ ಎಂದು ಟೀಕಿಸಿದರು. ಕೋರ್ಟ್, ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಮಗೆ ಕಿಮ್ಮತ್ತಿಲ್ಲವೇ ಎಂದು ಕೇಳಿದರು.

ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ಆದ ದಾಳಿ ವೇಳೆ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಹಲವಾರು ಪೊಲೀಸ್ ಅಧಿಕಾರಿಗಳ ಜೀವಹಾನಿ ಆಗುತ್ತಿತ್ತೆಂದು ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದರು. ಯುಎಪಿಎ ಕಾನೂನಿನಡಿ ಇದ್ದ ಕೇಸುಗಳನ್ನು ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಸಿನ ದಲಿತ ಶಾಸಕನ ಮನೆಯನ್ನು ಸುಟ್ಟು ಹಾಕಿದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಕೇಸುಗಳನ್ನು ಹಿಂಪಡೆಯಲು ಮುಂದಾಗಿದ್ದಾರೆ ಎಂದು ದೂರಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಎತ್ತಿನಹೊಳೆ ನಾಲೆಯ ಕಾಮಗಾರಿ ಗುಂಡಿಗೆ ಬಿದ್ದು ಬಾಲಕರು ದಾರುಣ ಸಾವು