ಬೆಂಗಳೂರು: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಹಿಂದೂ ಉಪಜಾತಿ ಸೇರಿಸಿದ್ರೆ ತಪ್ಪೇನು ಎಂದು ಸಚಿವ ಎಂಬಿ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದಲ್ಲಿ ಜಾತಿ ಗಣತಿ ಕಾಲಂನಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ದಲಿತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂದೆಲ್ಲಾ ಹಿಂದೂ ಉಪಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಜೊತೆ ಸೇರಿಸಲಾಗಿದೆ.
ಇದರ ಬಗ್ಗೆ ಬಿಜೆಪಿ ಸೇರಿದಂತೆ ಹಿಂದೂಗಳಿಂದ ವಿರೋಧ ವ್ಯಕ್ತವಾಗಿದೆ. ಆದರೆ ಹಿಂದೂ ಧರ್ಮದ ಜಾತಿಗಳಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಉಪ ಜಾತಿ ಸೇರಿಸಲಾಗುತ್ತಿದೆ. ಮತಾಂತರಗೊಳ್ಳುವುದು ತಪ್ಪೇ, ಮತಾಂತರವಾದವರಿಗೆ ಸವಲತ್ತು ಸಿಗಬಾರದೇ ಎಂದು ಸಿಎಂ ಸಿದ್ದರಾಮಯ್ಯ ನಿರ್ಧಾರ ಸಮರ್ಥಿಸಿಕೊಂಡಿದ್ದರು.
ಇದೀಗ ಸಚಿವ ಎಂಬಿ ಪಾಟೀಲ್ ಕೂಡಾ ಇದನ್ನು ಸಮರ್ಥಿಸಿಕೊಂಡಿದ್ದು ಹಿಂದೂ ಉಪಜಾತಿ ಹೆಸರು ಸೇರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಲಿಂಗಾಯತರು, ಕುರುಬರು ಮತಾಂತರಗೊಂಡಿದ್ದಾರೆ. ಹೀಗಾಗಿ ಅವರಿಗಾಗಿ ಈ ರೀತಿ ಉಪಜಾತಿ ಕಾಲಂ ಮಾಡಲಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.