ಬೆಂಗಳೂರು: ಕರ್ನಾಟಕದ ಪ್ರಸಿದ್ಧ ಬ್ರ್ಯಾಂಡ್ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈ ಜಾಲದ ಕಿಂಗ್ ಪಿನ್ ದಂಪತಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಪ್ರಮುಖ ಆರೋಪಿಗಳಾದ ಶಿವಕುಮಾರ್ ಮತ್ತು ರಮ್ಯ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ದಂಪತಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಒಡೆತನದ ನಂದಿನಿ ಹೆಸರಿನಲ್ಲಿ ನಕಲಿ ತುಪ್ಪವನ್ನು ತಯಾರಿಸುವ ಘಟಕವನ್ನು ಹೊಂದಿದ್ದಾರೆ.
ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಪೊಲೀಸರು ಬುಧವಾರ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ನಕಲಿ ನಂದಿನಿ ತುಪ್ಪ, ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಂಡಿರುವುದು ಪತ್ತೆಯಾಗಿತ್ತು.
ಈ ದಂಪತಿ ಅತ್ಯಾಧುನಿಕ ಕೈಗಾರಿಕಾ ಯಂತ್ರೋಪಕರಣಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ನಕಲಿ ತುಪ್ಪ ಮಾರಾಟ ಜಾಲದಲ್ಲಿ ಶಾಮೀಲಾಗಿದ್ದ ನಾಲ್ವರನ್ನು ಈ ಮೊದಲು ಬಂಧಿಸಲಾಗಿತ್ತು.
ನಕಲಿ ನಂದಿನಿ ತುಪ್ಪ ತಯಾರಿಸಲು ಬಳಸುತ್ತಿದ್ದ ಎಲ್ಲಾ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ.