ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆಯ ಪರಿಣಾಮ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯ (ಕೆಎಂಎಫ್) ತುಪ್ಪ, ಬೆಣ್ಣೆ, ಪನೀರ್ ಸೇರಿ ನಂದಿನಿ ಹಾಲಿನ 20 ಉತ್ಪನ್ನಗಳು ನಾಳೆಯಿಂದ ಅಗ್ಗವಾಗಲಿದೆ. ಇದೇ 22ರಿಂದಲೇ ಪರಿಷ್ಕೃತ ದರ ಅನ್ವಯ ಆಗಲಿದೆ.
ಜಿಎಸ್‌ಟಿ ಇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯದ ಆದೇಶದ ಅನ್ವಯ, ಆಡಳಿತ ಮಂಡಳಿ ಸಭೆ ನಡೆಸಿ ಹಾಲಿನ ಉತ್ಪನ್ನಗಳ ಮೇಲಿನ ದರ ಪರಿಷ್ಕರಿಸಲಾಗಿದೆ.
ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ 12ರಿಂದ ಶೇ 5ಕ್ಕೆ, ಕುಕೀಸ್, ಚಾಕೋಲೇಟ್ಸ್, ಐಸ್‌ಕ್ರೀಂ, ಇನ್‌ಸ್ಟಂಟ್ ಮಿಕ್ಸ್ ಮತ್ತು ಪ್ಯಾಕ್ಡ್ ನೀರಿನ ಮೇಲಿನ ಜಿಎಸ್‌ಟಿ ಶೇ 18ರಿಂದ ಶೇ 5ಕ್ಕೆ ಇಳಿಕೆಯಾಗಿದೆ.
ನಂದಿನಿ ಪನೀರ್ ಮತ್ತು ಯುಎಚ್‌ಟಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ 5ರಿಂದ ಶೂನ್ಯಕ್ಕೆ ಇಳಿಕೆಯಾಗಿದೆ. ನಂದಿನಿ ಮೊಸರಿನ ಮೇಲಿನ ಜಿಎಸ್‌ಟಿ ಈ ಮೊದಲಿನಂತೆ ಶೇ 5 ರಷ್ಟು ಇರಲಿದೆ. ಆದ್ದರಿಂದ ಮೊಸರಿನ ದರದಲ್ಲಿ ವ್ಯತ್ಯಾಸವಾಗುವುದಿಲ್ಲ. ಹಾಲಿನ ದರವೂ ಈ ಮೊದಲಿನಂತೆ ಇರಲಿದೆ.
1 ಲೀಟರ್ ತುಪ್ಪದ ದರ ₹650ರಿಂದ ₹610ಕ್ಕೆ ಇಳಿಕೆ ಮಾಡಲಾಗಿದೆ. ಇದೇ ರೀತಿ, ಮೊಸರು ಹೊರತುಪಡಿಸಿ ಹಾಲಿನ ಇತರ ಉತ್ಪನ್ನಗಳ ದರ ಇಳಿಸಲಾಗಿದೆ. ಈಗಾಗಲೇ ಪೂರೈಕೆ ಆಗಿರುವ ಉತ್ಪನ್ನಗಳ ಮೇಲೆ ಹಳೆ ದರ ಇದ್ದರೂ, ಮಾರಾಟಗಾರರು ಕಡ್ಡಾಯವಾಗಿ ಪರಿಷ್ಕೃತ ದರವನ್ನೇ ಪಡೆಯಲು ಸೂಚಿಸಲಾಗಿದೆ.
ತುಪ್ಪ, ಬೆಣ್ಣೆ, ಪನ್ನೀರ್, ಗುಡ್‌ಲೈಫ್ ಹಾಲು, ಚೀಸ್, ಐಸ್‌ಕ್ರೀ, ಖಾರ ಉತ್ಪನ್ನ, ಕೇಕ್, ನಂದಿನಿ ನೀರು, ಪಾಯಸ, ಜಾಮೂನ್, ಕುಕ್ಕಿಸ್, ಬಾದಾಮ್ ಹಾಲಿನ ಪುಡಿ, ಮಫಿನ್, ಸ್ಪ್ಯಾಶ್‌ವೇ ಡ್ರಿಂಕ್, ರೈಸ್ ಕ್ರಿಪಿ ಮಿಲ್ಕ್ ಚಾಕೊ ಉತ್ಪನ್ನಗಳ ದರ ಇಳಿಸಲಾಗಿದೆ.
ನಂದಿನಿ ಹಾಲಿನ ಉತ್ಪನ್ನಗಳಿಗೆ ಸೋಮವಾರದಿಂದಲೇ ಪರಿಷ್ಕೃತ ದರ ಅನ್ವಯ ಆಗುತ್ತದೆ. ಮಾರಾಟಗಾರರು ಕಡ್ಡಾಯವಾಗಿ ಪರಿಷ್ಕೃತ ದರಕ್ಕೆ ಮಾರಾಟ ಮಾಡಬೇಕು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಸೂಚಿಸಿದ್ದಾರೆ.