ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಕನಿಷ್ಠ ತಾಪಮಾನ ಕೆಲವೆಡೆ ದಾಖಲೆಯ ಮಟ್ಟಕ್ಕೆ ತಲುಪಿದೆ. ಇಂದಂತೂ ವಿಪರೀತ ಚಳಿಯ ವಾತಾವರಣವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ನಿನ್ನೆ ಕೆಲವೆಡೆ ಚಳಿಯ ಜೊತೆಗೆ ತುಂತುರು ಮಳೆಯೂ ಕಂಡುಬಂದಿತ್ತು. ಇಂದು ಮಳೆಯ ಸಾಧ್ಯತೆಯಿಲ್ಲ. ಆದರೆ ರಾಜ್ಯದ ಸರಾಸರಿ ಕನಿಷ್ಠ ತಾಪಮಾನವಂತೂ 15 ಡಿಗ್ರಿಗೆ ಕುಸಿಯಲಿದೆ. ವಿಶೇಷವೆಂದರೆ ಕರಾವಳಿ ಜಿಲ್ಲೆಗಳಲ್ಲೂ ವಿಪರೀತ ಚಳಿ ಕಂಡುಬರುತ್ತಿದೆ.
ಚಿಕ್ಕಮಗಳೂರು, ಕೊಡಗು, ಹಾಸನ, ರಾಮನಗರ, ಬೆಂಗಳೂರು, ಬೀದರ್, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಇಂದು ಕನಿಷ್ಠ ತಾಪಮಾನ 12-14 ಡಿಗ್ರಿಯೊಳಗಿರಲಿದೆ. ಈ ಜಿಲ್ಲೆಗಳಲ್ಲಿ ವಿಪರೀತ ಚಳಿಯ ಜೊತೆ ಮೋಡ ಕವಿದ ವಾತಾವರಣವೂ ಕಂಡುಬರಲಿದೆ.
ಉಳಿದಂತೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲಿದ್ದರೂ ಚಳಿಯೂ ಹೆಚ್ಚಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಇಂದು ಕನಿಷ್ಠ ತಾಪಮಾನ 15-16 ಡಿಗ್ರಿಯೊಳಗಿರಲಿದೆ. ವಾರಂತ್ಯಕ್ಕೆ ಇನ್ನಷ್ಟು ಚಳಿ ನಿರೀಕ್ಷಿಸಲಾಗಿದೆ. ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 27 ಡಿಗ್ರಿಯಷ್ಟಿರಲಿದೆ.