Publish Date: Wed, 17 Dec 2025 (20:09 IST)
Updated Date: Wed, 17 Dec 2025 (20:12 IST)
ಬೆಳಗಾವಿ: ಮಿಸ್ಟರ್ ಕ್ಲೀನ್ ಎಂದು ಬಿಂಬಿಸಿಕೊಳ್ಳುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದ್ದು, ತಕ್ಷಣ ರಾಜೀನಾಮೆ ಕೊಡಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದ ಅವರು, ಭೂದಾಖಲೆಗಳನ್ನು ಪ್ರದರ್ಶಿಸಿದರು. ಸ್ಮಶಾನ ಭೂಮಿ ಮತ್ತು ಕೆರೆ ಭೂಮಿಯನ್ನು ವರ್ಗಾಯಿಸಿದ್ದರ ಕುರಿತು ಸರಕಾರ ತನಿಖೆ ನಡೆಸಬೇಕು. ಇದರ ಕುರಿತು ಸದನದಲ್ಲಿ ಉತ್ತರಿಸಬೇಕೆಂದು ಆಗ್ರಹಿಸಿದರು.
ಇದು ಕೋಲಾರ ಜಿಲ್ಲೆ ನರಸಾಪುರ ಹೋಬಳಿ ಗರುಡನಪಾಳ್ಯ ಗ್ರಾಮದ ಸರ್ವೇ ನಂಬರ್ 47ರ 1 ಎಕರೆ ಜಾಗ ಮತ್ತು 46 ಸರ್ವೇ ನಂಬರ್‍ನ ವಿಚಾರ. ಎರಡನೆಯದು ಕೆರೆ ಅಂಗಳ, 20 ಎಕರೆ 16 ಗುಂಟೆ ಜಾಗ. ಒಟ್ಟು ಸೇರಿದರೆ 21 ಎಕರೆ 16 ಗುಂಟೆ. ಪ್ರತಿ ಎಕರೆಗೆ 5ರಿಂದ 6 ಕೋಟಿ ಬೆಲೆಯ ಜಮೀನುಗಳು ಇವು. ಸರ್ವೇ ನಂಬರ್ 47ರ 1 ಎಕರೆ ಜಾಗ ಸ್ಮಶಾನದ ಜಮೀನು. ಇದನ್ನು ಯಾರೂ ತಮ್ಮ ಹೆಸರಿಗೆ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಗಮನ ಸೆಳೆದರು. ಮಾನ್ಯ ಕೃಷ್ಣಬೈರೇಗೌಡ, ಬಿನ್ ಲೇಟ್ ಸಿ.ಬೈರೇಗೌಡ (ಮಾಜಿ ಸಚಿವ) ಅವರು ಪಂಚಾಯತ್ ಪಾರೀಖ ಮಾಡಿ, ಇವೆರಡನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ದಾಖಲೆಗಳೊಂದಿಗೆ ಮಾಹಿತಿ ಕೊಟ್ಟರು.
ಮೂಲ ದಾಖಲೆಗಳ ಪ್ರಕಾರ ಸರಕಾರಿ ಖರಾಬು ಸ್ಮಶಾನ ಎಂದಿದೆ. ಇದನ್ನು ಕಂದಾಯ ಸಚಿವರ ಹೆಸರಿಗೆ ವರ್ಗಾಯಿಸಿದ್ದು ಹೇಗೆ ಎಂದು ಕೇಳಿದರು.
ಸ್ಮಶಾನವನ್ನು ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಎರಡನೆಯದಾಗಿ 20 ಎಕರೆ 16 ಗುಂಟೆ ಜಮೀನಿನಲ್ಲಿ ಮೂಲ ದಾಖಲೆಯಡಿ ಕೆರೆ ಎಂದಿದೆ. ಕೆಳಗಡೆ ಡಾಟ್ ಹಾಕಿ ಖರಾಬು ಎಂದು ಬರೆದಿದ್ದಾರೆ. ಎರಡೂ ಜಮೀನನ್ನು ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯವನ್ನು ಮುಂದಿಟ್ಟರು. ಇಂಥ ಅನೇಕ ಪ್ರಕರಣಗಳು ಇನ್ನು ಮುಂದೆ ಬರಲಿವೆ ಎಂದು ಅವರು ತಿಳಿಸಿದರು.
6-11-78ರಲ್ಲಿ ಕೆರೆ ಎಂದಿತ್ತು. ಖರಾಬು ಎಂಬುದು ಈಚೆಗೆ ಬಂದಿದೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಸ್ಮಶಾನ ಭೂಮಿಯನ್ನು 20-4-2024ರಲ್ಲಿ ಬದಲಿಸಿದ್ದಾರೆ ಎಂದರು. ಮುಂದೆ ಅನಿವಾರ್ಯವಾದರೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಪ್ರಶ್ನೆಗೆ ಉತ್ತರ ಕೊಟ್ಟರು. ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಮಹೇಶ್ ಟೆಂಗಿನಕಾಯಿ, ಪಕ್ಷದ ಪ್ರಮುಖರು ಇದ್ದರು.