ಕಲಬುರಗಿ: ಸಿಎಂ ಹಾಗೂ ಡಿಸಿಎಂ ವಾಚ್ ವಿಚಾರವಾಗಿ ಬಿಜೆಪಿ ಆರೋಪ ಮಾಡುವ ಬದಲು ಕೇಂದ್ರ ಸರ್ಕಾರದ ಐಟಿ ಇಲಾಖೆಯಿಂದ ಏಕೆ ತನಿಖೆ ನಡೆಸಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಯಾರು ಏನು ಆಹಾರ ಸೇವಿಸಿದರು, ಯಾವ ಬಟ್ಟೆ ಹಾಕಿಕೊಂಡರು, ಯಾವ ಕಂಪನಿ ವಾಚ್ ಧರಿಸಿದರು ಎಂಬುದೇ ಮುಖ್ಯವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ₹10 ಲಕ್ಷ ಮೊತ್ತದ ತಮ್ಮದೇ ಹೆಸರನ್ನು ಅಳವಡಿಸಿದ್ದ ಸೂಟ್ ಹಾಕಿಕೊಂಡಾಗ ಅದರ ಆದಾಯ ಮೂಲ ಯಾವುದೆಂದು ಯಾಕೆ ಪ್ರಶ್ನೆ ಹಾಕಿಲ್ಲ ಎಂದು ತಿರುಗೇಟು ನೀಡಿದರು.
ಈ ವಾಚ್ ಧರಿಸಿದವರು ಆಸ್ತಿವಂತರಿದ್ದಾರೆ. ತಮಗಿಷ್ಟವಾದ ವಾಚ್ ಹಾಕಿಕೊಂಡಿರಬಹುದು. ಬಿಜೆಪಿಯವರಿಗೇಕೆ ಇಷ್ಟು ಅಸಹನೆ ಎಂದು ಹರಿಹಾಯ್ದರು.