ಬೆಂಗಳೂರು: ವಾಚ್ ವಿಚಾರದಲ್ಲಿ ಕೇಳಿದಾಗ ಸುಳ್ಯಾಕೆ ಹೇಳುತ್ತೀರಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಒಂದೇ ಕಂಪೆನಿಯ ವಾಚ್ ಧರಿಸಿದ್ದಾರೆ. ಇದೊಂದು ಕಾಂಗ್ರೆಸ್ ಕಂಪೆನಿ ಇದ್ದಂತೆ ಎಂದು ಟೀಕಿಸಿದರು.
ಚುನಾವಣಾ ಅಫಿಡವಿಟ್‍ನಲ್ಲಿ ಡಿ.ಕೆ.ಶಿವಕುಮಾರ್ ಅವರು ಒಂದು ರೋಲೆಕ್ಸ್ ವಾಚ್ 9 ಲಕ್ಷ ಎಂದು ತಿಳಿಸಿದ್ದಾರೆ. ಹೂಬ್ಲೋಟ್ ವಾಚ್ 23,90,246 ರೂ. ಎಂದಿದ್ದಾರೆ. ಅವರಿಬ್ಬರ ಕೈಯಲ್ಲಿ ಕಾರ್ಟಿಯರ್ ಕಂಪೆನಿಯ ವಾಚ್ ಇದೆ. ಎಲ್ಲಿ ಅದನ್ನು ತಿಳಿಸಿದ್ದಾರೆ? ಇವತ್ತಿನ ದರ 43 ಲಕ್ಷ ಇದ್ದು, ತೆರಿಗೆ ಸೇರಿ 46-47 ಲಕ್ಷ ಆಗುತ್ತದೆ ಎಂದರು.
ಇದು ಕದ್ದ ಮಾಲೇ? ಕೊಂಡ ಮಾಲೇ? ಒಂದುವೇಳೆ ನೀವು ರಾಜ್ಯಕ್ಕೆ ಸುಳ್ಳು ಹೇಳಿದ್ದರೆ? ಕಾರ್ಡಿನಿಂದ ಪಾವತಿ ಆಗಿದ್ದರೆ ದಾಖಲೆ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರು ವಾಚ್‍ಗಳ ಪ್ರಿಯರು; ಅವರ ವಾಚ್‍ಗಳು ಕೋಟ್ಯಂತರ ರೂ. ಮೌಲ್ಯದ್ದು; ಅವರ ಶೂ ಕೂಡ ಲಕ್ಷಾಂತರ ರೂ. ಬೆಲೆಯದು ಎಂದು ವಿವರಿಸಿದರು.
ಒಂದೂವರೆ ವರ್ಷ ಹಿಂದೆ ನಾನು ವಾಚ್‍ಗಳ ಬಗ್ಗೆ ಹೇಳಿದ್ದೆ. ಆಗ 8 ವಾಚ್ ಇತ್ತು. ಈಗ 18- 19 ವಾಚ್ ಇದೆ ಎಂದು ಮಾಹಿತಿ ಲಭಿಸಿದೆ ಎಂದರು. ಎಲ್ಲಿ ಇವುಗಳ ಲೆಕ್ಕ ಕೊಟ್ಟಿದ್ದೀರಿ ಎಂದು ಕೇಳಿದರು. ಈಗ ಇದಕ್ಕೆ ಲೆಕ್ಕ ಕೊಡಿ ಎಂದು ಒತ್ತಾಯಿಸಿದರು.
ನಿಮ್ಮ ಸಮಯ ಸರಿ ಇದ್ದರೆ...
ವಾಚೇನೋ ಸರಿ ಇರಬಹುದು; ಅದರಲ್ಲಿ ತೋರಿಸುವ ಸಮಯ ಸರಿ ಇಲ್ಲ; ನಿಮ್ಮ ಸಮಯ ಸರಿ ಇದ್ದರೆ ಇವೆಲ್ಲ ಬರುತ್ತಿರಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಗಿ ತಿಳಿಸಿದರು.
ಒಂದೇ ಕಂಪೆನಿ ವಾಚ್ ಕಟ್ಟಿದ್ದರೂ ಒಬ್ಬರು ಬಿಟ್ಟು ಕೊಡಬೇಕು; ಇನ್ನೊಬ್ಬರು ಹಿಡಿದುಕೊಂಡು ಕೂತ್ಕೋಬೇಕಿದೆ ಎಂದರು. ಶೇ 63 ಭ್ರಷ್ಟಾಚಾರದ ಸಂಬಂಧ ತನಿಖೆ ನಡೆಸಿ ಎಂದು ಆಗ್ರಹವನ್ನು ಮುಂದಿಟ್ಟರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ವಕ್ತಾರ ಪ್ರಕಾಶ್ ಅವರು ಹಾಜರಿದ್ದರು.