ಬೆಂಗಳೂರು: ರಾಜ್ಯದಲ್ಲಿ ಮೊಟ್ಟೆ ದರ ಏರಿಕೆಯಾಗಿರುವುದು ಶಿಕ್ಷಕರಿಗೆ ಬರೆ ಹಾಕಿದಂತಾಗಿದೆ. ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬೇಕೆಂದರೆ ಶಿಕ್ಷಕರೇ ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮೊಟ್ಟೆ ಭಾಗ್ಯ ಯೋಜನೆ ಜಾರಿಗೊಳಿಸಿದೆ. ಮಕ್ಕಳಿಗೆ ಮೊಟ್ಟೆ ಖರೀದಿಸಲು ನಿರ್ದಿಷ್ಟ ಹಣವನ್ನೂ ಶಾಲೆಗೆ ನಿಡಲಾಗುತ್ತಿದೆ. ಆದರೆ ಈಗ ಮೊಟ್ಟೆಗೆ ಬೆಲೆ ಏರಿಕೆಯಾಗಿದೆ.
ಆದರೆ ರಾಜ್ಯ ಸರ್ಕಾರದಿಂದ ಬರುವ ಹಣ ಮಾತ್ರ ಏರಿಕೆಯಾಗಿಲ್ಲ. ಹೀಗಾಗಿ ಮಕ್ಕಳಿಗೆ ಮೊಟ್ಟೆ ಖರಿದಿಸಿಕೊಡಲು ಶಾಲೆಯ ಮುಖ್ಯೋಪಾದ್ಯರೇ ತಮ್ಮ ಸ್ವಂತ ಜೇಬಿನಿಂದ ದುಡ್ಡು ಹಾಕಬೇಕಾಗುತ್ತಿದೆ. ಇದರ ವಿರುದ್ಧ ಈಗ ಶಿಕ್ಷಕರಿಂದ ಅಸಮಾಧಾನ ಕೇಳಿಬಂದಿದೆ.
ಈ ಹಿಂದೆ ಮೊಟ್ಟೆಯ ದರ 5.30 ರೂ. ಇತ್ತು. ಈಗ ಇದು 6 ರೂ. ನಿಂದ 6.80 ರೂ.ಗೆ ಏರಿಕೆಯಾಗಿದೆ. ಶಿಕ್ಷಣ ಇಲಾಖೆ ಪ್ರತೀ ಮೊಟ್ಟೆಗೆ 6 ರೂ. ನಿಗದಿಪಡಿಸಿದೆ. ಹೀಗಾಗಿ ಉಳಿದ ಹಣವನ್ನು ಶಿಕ್ಷಕರೇ ಭರಿಸಬೇಕಾಗುತ್ತಿದೆ. ಜೊತೆಗೆ ಮೊಟ್ಟೆ ಬೇಯಿಸುವ ವ್ಯವಸ್ಥೆ ಮಾಡಲೂ ಖರ್ಚಾಗುತ್ತಿದೆ. ಇದನ್ನು ಶಿಕ್ಷಕರೇ ಭರಿಸಬೇಕು. ಹೀಗಾಗಿ ಅನಿವಾರ್ಯವಾಗಿ ಕೆಲವು ಶಾಲೆಗಳು ದಾನಿಗಳ ಮೊರೆ ಹೋಗುತ್ತಿದ್ದಾರೆ. ದಾನಿಗಳು ಸಿಗದೇ ಇದ್ದರೆ ಶಿಕ್ಷಕರೇ ಈ ಹೊರೆ ಹೊರಬೇಕಾಗುತ್ತಿದೆ. ಸರ್ಕಾರ ಜಾರಿಗೊಳಿಸಿದ ಯೋಜನೆಯ ಜವಾಬ್ಧಾರಿಯನ್ನು ಶಿಕ್ಷಕರು ಹೊರಬೇಕಾಗಿರುವುದು ವಿಪರ್ಯಾಸ.