ಬೆಂಗಳೂರು: ಮೊದಲ ಬಾರಿ ಎಂಬಂತೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಇದಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಹಾಗೂ ಪೊಲೀಸ್ ಇಲಾಖೆಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಕೃತಜ್ಞತೆ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ರಾತ್ರಿ ಲಕ್ಷಾಂತರ ಯುವಕರು, ನಾಗರಿಕರು ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮೊದಲ ಬಾರಿಗೆ ಹೊಸ ವರ್ಷದ ಆಚರಣೆಯು ಸುಗಮವಾಗಿ ನಡೆದಿದೆ ಎಂದರು.
ಹೊಸ ವರ್ಷಚಾರಣೆ ಹಿನ್ನೆಲೆ ಪೊಲೀಸ್ ಇಲಾಖೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತು . ಇದಕ್ಕೆ ಯುವ ಪೀಳಿಗೆ ಕೂಡಾ ಬೆಂಬಲ ಸೂಚಿಸಿತು. ಈ ವರ್ಷ ವಿರೋಧ ಪಕ್ಷದ ನಾಯಕರು ರಾಜ್ಯದ ಅಭಿವೃದ್ಧಿಗೆ ಸಹಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ನಾವು ಕರ್ನಾಟಕವನ್ನು ಎಲ್ಲ ಸಮುದಾಯಗಳ ಶಾಂತಿಯ ತೋಟವಾಗಿ ರೂಪಿಸಿದ್ದೇವೆ. ಅಭಿವೃದ್ಧಿಯ ದೃಷ್ಟಿಕೋನದಿಂದ ವಿರೋಧ ಪಕ್ಷಗಳು ನಮ್ಮನ್ನು ಬೆಂಬಲಿಸಿದರೆ, ಅದು ಪ್ರಯೋಜನಕಾರಿಯಾಗುತ್ತದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟುಬಿಡಬೇಕು ಎಂದು ನಾನು ಸೂಚಿಸುತ್ತಿಲ್ಲ. ಆದರೆ, ಸರ್ಕಾರವನ್ನು ಜವಾಬ್ದಾರಿಯುತವಾಗಿ ರಚನಾತ್ಮಕವಾಗಿ ಎಚ್ಚರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.