ಬೆಂಗಳೂರು: ಎಲ್ಲಾ ದುಬಾರಿಯಾಗಿರುವ ಈ ಕಾಲದಲ್ಲಿ ಮಧ್ಯಮ ವರ್ಗದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಾಗಿದೆ. ಮಕ್ಕಳ ಶಾಲಾ ಫೀಸ್ ಕರ್ನಾಟಕದಲ್ಲಿ ಏಕಾಏಕಿ ಏರಿಕೆಯಾಗಿದ್ದು ಪೋಷಕರು ಕಂಗಾಲಾಗಿದ್ದಾರೆ.
ಮುಂದಿನ ವರ್ಷದ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆ ಈಗಾಗಲೇ ಬಹುತೇಕ ಶಾಲೆಗಳಲ್ಲಿ ಶುರುವಾಗಿದೆ. ಆದರೆ ಶಾಲಾ ಮಂಡಳಿ ನೀಡಿದ ಶುಲ್ಕದ ಪಟ್ಟಿ ನೋಡಿ ಪೋಷಕರು ಶಾಕ್ ಆಗಿದ್ದಾರೆ. ಬೆಂಗಳೂರಿನ ಖಾಸಗಿ ಶಾಲೆಗಳ ಶುಲ್ಕವಂತೂ ಗಗನಕ್ಕೇರಿದೆ.
ಕೆಲವು ಶಾಲೆಗಳಲ್ಲಿ 10-15% ಶೇಕಡಾ ಏರಿಕೆಯಾಗಿದ್ದರೆ ಇನ್ನು ಕೆಲವು ಶಾಲೆಗಳಲ್ಲಿ ಏಕಾಏಕಿ 50% ಹೆಚ್ಚಳ ಮಾಡಲಾಗಿದೆ. ಇದರಿಂದ ಶುಲ್ಕದಲ್ಲಿ ಸುಮಾರು 20,000-25,000 ರೂ. ಏರಿಕೆಯಾಗಿದೆ. ಶುಲ್ಕದ ಪಟ್ಟಿ ನೋಡಿ ಪೋಷಕರು ಶಾಕ್ ಆಗಿದ್ದಾರೆ.
ಡೀಸೆಲ್ ಬೆಲೆ ಏರಿಕೆ ನೆಪದಲ್ಲಿ ವ್ಯಾನ್, ಶಾಲಾ ಬಸ್ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಇದಲ್ಲದೆ ಪುಸ್ತಕ, ಬ್ಯಾಗ್, ಶೂ, ಯೂನಿಫಾರ್ಮ್ ಎಂದು ಪ್ರತ್ಯೇಕವಾಗಿ ಹಣ ಕಿತ್ತುಕೊಳ್ಳಲಾಗುತ್ತಿದೆ. ಹೀಗೇ ಮುಂದುವರಿದರೆ ಮಕ್ಕಳನ್ನು ಓದಿಸುವುದು ಹೇಗೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.