ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಮತ್ತು ಬಿಸಲಿನ ನಡುವೆ ಕಣ್ಣಾಮುಚ್ಚಾಲೆಯಾಗುತ್ತಿದೆ. ಬೆಂಗಳೂರಿನಲ್ಲಂತೂ ಮಳೆ ಬಂದು ವಾರವಾಗುತ್ತಾ ಬಂದಿದೆ. ಇನ್ನೀಗ ಎರಡು ದಿನ ವಿಪರೀತ ಬಿಸಿಯಿರಲಿದ್ದು, ಆ ಬಳಿಕ ಮಳೆ ಯಾವಾಗ ಬರಲಿದೆ ಎಂಬ ಹವಾಮಾನ ವರದಿ ಇಲ್ಲಿದೆ ನೋಡಿ.
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಲೇ ಇದೆ. ಇದರ ಜೊತೆಗೆ ತಾಪಮಾನವೂ ಗರಿಷ್ಠ ಮಟ್ಟದಲ್ಲಿದೆ. ಆದರೆ ನಿರಂತರವಾಗಿ ಬಿರುಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ನಿನ್ನೆ ಕೂಡಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು.
ಇಂದೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ. ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಮಳೆಯ ಸೂಚನೆಯಿಲ್ಲ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿ ಮೋಡ ಕವಿದಂತೆ ಕಂಡುಬರುತ್ತಿದ್ದರೂ ತಾಪಮಾನ ವಿಪರೀತವಾಗಿದೆ.
ನಿನ್ನೆ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟಿತ್ತು. ಇಂದೂ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟು ಇರಲಿದೆ. ಸಂಜೆ ವೇಳೆಗೆ ಕೊಂಚ ಮೋಡ ಕವಿದ ವಾತಾವರಣ ಕಂಡುಬರಲಿದೆ. ಈ ವಾತಾವರಣ ಇಂದು ಮತ್ತು ನಾಳೆಯಿರಲಿದೆ. ಆದರೆ ಶುಕ್ರವಾರದಿಂದ ಬೆಂಗಳೂರಿಗೆ ಮೂರು ದಿನಗಳ ಕಾಲ ಮಳೆಯ ಸೂಚನೆಯಿದೆ. ಶುಕ್ರವಾರ ಮತ್ತು ಶನಿವಾರ ವಿಪರೀತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ.