ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿರುವ ಯುವ ಗಾಯಕರ ಪಟ್ಟಿಯಲ್ಲಿ ಈಗ ರಾಹುಲ್ ವೆಲ್ಲಾಳ್ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಈ ಪ್ರತಿಭಾವಂತ ಗಾಯಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೆಗೆದ ಅಂಕವೆಷ್ಟು ಎಂದು ನೋಡಿದರೆ ನಿಜಕ್ಕೂ ನಮಗೆ ಸ್ಪೂರ್ತಿ.
ಚಿಕ್ಕ ವಯಸ್ಸಿನಿಂದಲೂ ಗಾಯನವನ್ನೇ ವೃತ್ತಿಯಾಗಿಸಿಕೊಂಡು ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗಾಯಕ ರಾಹುಲ್ ವೆಲ್ಲಾಳ್ ಈಗ ದ್ವಿತೀಯ ಪಿಯುಸಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಇಂದು ಪ್ರಕಟವಾಗಿರುವ ಫಲಿತಾಂಶದಲ್ಲಿ ಅವರಿಗೆ ಶೇ.98.7 ಅಂಕಗಳು ಬಂದಿವೆ. ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದ ರಾಹುಲ್ ವೆಲ್ಲಾಳ್ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಭೌತ ಶಾಸ್ತ್ರದಲ್ಲಿ 100 ಕ್ಕೆ 100 ಅಂಕ, ಕೆಮಿಸ್ಟ್ರಿಯಲ್ಲಿ 100 ಕ್ಕೆ 98 ಅಂಕ ಮತ್ತು ಗಣಿತದಲ್ಲಿ 100 ಕ್ಕೆ 98 ಅಂಕ ಪಡೆದು ಪಾಸ್ ಮಾಡಿಕೊಂಡಿದ್ದಾರೆ. ಸದಾ ಸಂಗೀತ ಕಾರ್ಯಕ್ರಮ, ಅಭ್ಯಾಸದಲ್ಲಿ ಮುಳುಗಿರುವ ರಾಹುಲ್ ವಿದ್ಯಾಭ್ಯಾಸದಲ್ಲೂ ಅಷ್ಟೇ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ. ಎಸ್ಎಸ್ಎಲ್ ಸಿಯಲ್ಲೂ ಅವರು 97% ಅಂಕ ಪಡೆದುಕೊಂಡಿದ್ದರು.
ಇದೀಗ ತಮ್ಮ ಮಗನ ಸಾಧನೆ ಬಗ್ಗೆ ಅವರ ತಂದೆ ರವಿಶಂಕರ್ ವೆಲ್ಲಾಳ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವನ ಬ್ಯುಸಿ ದಿನಚರಿಯ ನಡುವೆಯೂ, ನಿಯಮಿತವಾಗಿ ಕಚೇರಿಗಳು, ವಿಡಿಯೋ ಶೂಟ್, ರೆಕಾರ್ಡಿಂಗ್ ಮತ್ತು ಪ್ರತಿನಿತ್ಯದ ಸಂಗೀತ ಅಭ್ಯಾಸದ ನಡುವೆಯೂ ಸಂಗೀತ ಹಾಗೂ ಓದಿನ ಕಡೆಗೆ ಏಕ ರೀತಿಯಲ್ಲಿ ಪರಿಶ್ರಮ ಪಟ್ಟಿದ್ದಕ್ಕೆ ಇದು ಸಾಕ್ಷಿ. ಕೆಲವೊಮ್ಮೆ ಕಚೇರಿಗಳನ್ನು ಮುಗಿಸಿ ಬೇರೆ ದೇಶ, ರಾಜ್ಯಗಳಿಂದ ಬೆಳಗಿನ ಜಾವ ನೇರವಾಗಿ ಕಾಲೇಜಿಗೆ ಹೋಗಿದ್ದೂ ಇದೆ. ಅವನ ಶಿಸ್ತು, ಪರಿಶ್ರಮಕ್ಕೆ ಈ ಫಲಿತಾಂಶ ಸಂದಾಯವಾಗಿದೆ ಎಂದಿದ್ದಾರೆ.
ಶಾಲೆ/ಕಾಲೇಜಿಗೆ ಹೋಗುವ ವಿದ್ಯಾರ್ಥಿ ಕಲಾವಿದರಿಗೆ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಶಾಲೆ/ಕಾಲೇಜಿನ ಪ್ರೋತ್ಸಾಹವೂ ಬೇಕು. ಅದಕ್ಕಾಗಿ ಆರ್ ವಿ ಕಾಲೇಜು ಪ್ರಾಧ್ಯಾಪಕರು ಮತ್ತು ರಾಹುಲ್ ಗೆ ತರಬೇತಿ ನೀಡಿದ್ದ ಬೇಸ್ ಕೋಚಿಂಗ್ ಸಿಬ್ಬಂದಿಗಳಿಗೂ ತಂದೆ ರವಿಶಂಕರ್ ಧನ್ಯವಾದ ಸಲ್ಲಿಸಿದ್ದಾರೆ.