ಬೆಂಗಳೂರು: ಕಳೆದ ವಾರ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ನಡೆದಿತ್ತು. ಈ ವಾರವೂ ಕೆಲವೆಡೆ ಮಳೆಯ ಸೂಚನೆಯಿದೆ. ಸೈಕ್ಲೋನ್ ಪರಿಣಾಮ ಕೆಲವು ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ. ಈ ವಾರ ಯಾವಾಗಿನಿಂದ ಮಳೆ ಶುರುವಾಗಲಿದೆ, ಎಲ್ಲೆಲ್ಲಿ ಮಳೆಯಾಗಲಿದೆ ಇಲ್ಲಿ ನೋಡಿ ವಿವರ.
ರಾಜ್ಯದಲ್ಲಿ ಕಳೆದ ಎರಡು ದಿನದಿಂದ ಬಹುತೇಕ ಬಿಸಿಲಿನ ವಾತಾವರಣ ಮುಂದುವರಿದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಿಟ್ಟರೆ ಬಹುತೇಕ ಕಡೆ ಬಿಸಿಲಿನ ಹವೆಯಿದೆ. ಆದರೆ ಈ ವಾರ ಮತ್ತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಆರಂಭದ ಮೂರು ದಿನಗಳು ಈ ವಾರ ಮಳೆಯ ಸಾಧ್ಯತೆಯಿಲ್ಲ. ಆದರೆ ಬುಧವಾರದಿಂದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂದು ಮತ್ತು ನಾಳೆ ರಾಜ್ಯದ ಸರಾಸರಿ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟಿರಲಿದೆ.
ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಉಡುಪಿ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಬುಧವಾರ, ಗುರುವಾರ, ಶುಕ್ರವಾರಗಳಂದು ಮಳೆಯ ಸೂಚನೆಯಿದೆ. ದಕ್ಷಿಣ ಕನ್ನಡದಲ್ಲಿ ಇಂದೂ ಮಳೆಯಾಗುವ ಸಾಧ್ಯತೆಯಿದ್ದು, ಈ ವಾರವಿಡೀ ಮಳೆ ಸುರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.