ಬೆಂಗಳೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಡಳಿತ ಕರ್ನಾಟಕದ ತೋತಾಪುರಿ ಮಾವು ಖರೀದಿಗೆ ನಿಷೇಧ ಹೇರಿರುವುದರಿಂದ ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಆಂಧ್ರ ಸಿಎಂಗೆ ಪತ್ರ ಬರೆದು ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ತೋತಾಪುರಿ ಮಾವಿಗೆ ನಿಷೇಧ ಹೇರಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ತಕ್ಷಣವೇ ಮಾವು ನಿಷೇಧ ಹಿಂಪಡೆಯಬೇಕು ಎಂದು ಸಿದ್ದರಾಮಯ್ಯ ನೇರವಾಗಿ ಆಂಧ್ರ ಸಿಎಂಗೆ ಪತ್ರ ಬರೆದಿದ್ದಾರೆ.
ಹಠಾತ್ ಆಗಿ ಕರ್ನಾಟಕದ ಮಾವಿಗೆ ನಿಷೇಧ ಹೇರಿರುವುದರಿಂದ ಇಲ್ಲಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಡಿ ಪ್ರದೇಶಗಳಲ್ಲಿ ಮಾವು ಬೆಳೆದವರಿಗೆ ತೊಂದರೆಯಾಗಿದೆ. ಈ ರೈತರು ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳೊಂದಿಗೆ ದೀರ್ಘ ಕಾಲದ ನಂಟು ಹೊಂದಿದ್ದಾರೆ. ಆದರೆ ಈಗ ಏಕಾಏಕಿ ನಿಷೇಧ ಹೇರಿರುವುದರಿಂದ ರೈತರಿಗೆ ಸಮಸ್ಯೆಯಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಈ ರೀತಿ ಪೂರ್ವಾಲೋಚನೆಯಿಲ್ಲದೇ ಏಕಾಏಕಿ ನಿಷೇಧ ಹೇರಿರುವುದು ಸಹಕಾರಿ ಒಕ್ಕೂಠ ವ್ಯವಸ್ಥೆಗೆ ವಿರುದ್ಧವಾಗಿದೆ. ಇದು ಉದ್ವಿಗ್ನತೆ ಮತ್ತು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.