ಆಂಧ್ರಪ್ರದೇಶ: ಹಿಂದೂ ದೇವಾಲಯಗಳಲ್ಲಿ ಇನ್ನು ಮುಂದೆ ಹಿಂದೂಗಳಿಗೆ ಮಾತ್ರ ಕೆಲಸ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಘೋಷಿಸಿದ್ದಾರೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತು ಉಳಿಸಿಕೊಟ್ಟಿದ್ದಾರೆ.
ಈ ಹಿಂದೆ ಜಗನ್ ರೆಡ್ಡಿ ಸರ್ಕಾರವಿದ್ದಾಗ ತಿರುಪತಿಯಂತಹ ದೇವಾಲಯಗಳಲ್ಲಿ ಹಿಂದೂಯೇತರರನ್ನು ಅಧಿಕಾರಿಗಳಾಗಿ ನೇಮಿಸಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ್ದ ಪವನ್ ಕಲ್ಯಾಣ್ ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಏನು ಕೆಲಸ? ಕೇವಲ ಹಿಂದೂ ದೇವಾಲಯಗಳ ಮೇಲೆ ಮಾತ್ರ ಸರ್ಕಾರದ ನಿಯಂತ್ರಣ ಯಾಕೆ ಎಂದು ಅಬ್ಬರಿಸಿದ್ದರು.
ಅಲ್ಲದೆ, ತಾವು ಅಧಿಕಾರಕ್ಕೆ ಬಂದರೆ ಈ ನಿಯಮ ಬದಲಿಸುವುದಾಗಿ ಹೇಳಿದ್ದರು. ಅದರಂತೆ ಈಗ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಿಂದೂ ದೇವಾಲಯದಲ್ಲಿ ಹಿಂದೂಗಳಿಗೆ ಮಾತ್ರ ಕೆಲಸ ಎನ್ನುವ ನಿಯಮಾವಳಿ ಹೊರತಂದಿದ್ದಾರೆ.
ಆಂಧ್ರದಲ್ಲಿ ಇಂದು ಹಿಂದೂಗಳಿಗಾಗಿ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಪ್ರಮುಖ ನಿರ್ಧಾರಗಳನ್ನು ಘೋಷಿಸಿದ್ದಾರೆ. ಅಲ್ಲದೆ, ಆಂಧ್ರದಲ್ಲಿ ಕೆಲಸ ಮಾಡುವ ದೇವಾಲಯದ ಅರ್ಚಕರ ವೇತನವನ್ನು 10 ಸಾವಿರದಿಂದ 15,000 ರೂ.ಗೆ ಏರಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಸಣ್ಣ ದೇವಾಲಯಗಳಿಗೆ ನೀಡುವ ಆರ್ಥಿಕ ಸಹಾಯವನ್ನೂ ಹೆಚ್ಚಿಸಲಾಗಿದೆ. ಅಲ್ಲದೆ ದೇವಾಲಯದ ಪರಿಸರ ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.