ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಹಳೆ ಕಥೆ ಹೇಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಬಿಜೆಪಿ ರಾಜ್ಯಾದಾದ್ಯಂತ ರಸ್ತೆ ತಡೆ ಮಾಡಿ, ರಸ್ತೆಯ ಪರಿಸ್ಥಿತಿ ಬಗ್ಗೆ ತಿಳಿಸುವ ಯತ್ನ ಮಾಡಲಾಗಿದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು, ಪುಗ್ಸಟ್ಟೆ ಭಾಷಣ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಬೆಂಗಳೂರಿನ ಗೌರವ, ಮರ್ಯಾದೆ ತೆಗೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅತೀ ಶೀಘ್ರವೇ ಗುಂಡಿಗಳನ್ನು ಮುಚ್ಚಿ ಬೆಂಗಳೂರಿನ ಗೌರವ ಉಳಿಸಬೇಕು ಎಂದು ಒತ್ತಾಯಿಸಿದರು.
ಸಿಲಿಕಾನ್ ಸಿಟಿ ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲಿಯಲ್ಲಿನ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಲು ರಾಜ್ಯ ಸರ್ಕಾರ ಆಗಲಿಲ್ಲ.
ಅಧಿಕಾರಿಗಳು ಹೋಗಿ ಎಷ್ಟು ರಸ್ತೆ ಗುಂಡಿಗಳಿವೆ ಎಂದು ಲೆಕ್ಕ ಹಾಕಿ ಬಂದಿದ್ದಾರೋ ಗೊತ್ತಿಲ್ಲ. ಹಲವಾರು ಬಾರಿ ಡೆಡ್‌ಲೈನ್ ಕೊಟ್ಟರೂ ಇವತ್ತಿಗೂ ಗುಂಡಿಗಳನ್ನು ಮುಚ್ಚಲು ಈ ಸರ್ಕಾರದ ಕಡೆಯಿಂದ ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು.