Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳದಿರಿ: ವಿಜಯೇಂದ್ರ ಎಚ್ಚರ

ಧರ್ಮಸ್ಥಳ ಚಲೋ. ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ

Sampriya

ಧರ್ಮಸ್ಥಳ , ಸೋಮವಾರ, 1 ಸೆಪ್ಟಂಬರ್ 2025 (18:31 IST)
Photo Credit X
ಧರ್ಮಸ್ಥಳ: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ತಡೆದಿಲ್ಲ. ಕಾಂಗ್ರೆಸ್ ಸರಕಾರ ಕಿತ್ತೊಗೆಯುವವರೆಗೆ ಹಿಂದೂ ಕಾರ್ಯಕರ್ತರು ನೆಮ್ಮದಿಯಿಂದ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಎಚ್ಚರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಇಂದು ರಾಜ್ಯ ಬಿಜೆಪಿ ವತಿಯಿಂದ ನಡೆದ “ಧರ್ಮಸ್ಥಳ ಚಲೋ” ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಧರ್ಮಸ್ಥಳದ ಭಕ್ತರ ಸಹನೆ ಕಟ್ಟೆ ಒಡೆದಿದೆ. ಆದರೆ, ಮುಖ್ಯಮಂತ್ರಿಗಳು ಎಸ್‍ಐಟಿ ತನಿಖೆ ಮಾತ್ರ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. 

ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರದ ತನಿಖೆ ಸಿಬಿಐ ಅಥವಾ ಎನ್‍ಐಎ ಯಿಂದ ಆಗಲಿ ಎಂದು ಆಗ್ರಹಿಸಿದರು.

ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡದಿರಿ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. 
ಎಡಪಂಥೀಯರ ಷಡ್ಯಂತ್ರದ ಕುರಿತು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಭಾರತ ಭೂಮಿಯನ್ನು ಗೌರವಿಸುವುದು ಕಾಂಗ್ರೆಸ್ಸಿಗರಿಗೆ ಅಕ್ಷಮ್ಯ ಎನಿಸಿದೆ. ಧರ್ಮಸ್ಥಳ ಚಲೋವನ್ನು ಹಗುರವಾಗಿ ತೆಗೆದುಕೊಳ್ಳದಿರಿ. ಕಾಂಗ್ರೆಸ್ ಸರಕಾರಕ್ಕೆ ಶ್ರೀ ಮಂಜುನಾಥ ಸ್ವಾಮಿ ಒಳ್ಳೆಯ ಬುದ್ಧಿ ಕೊಡಲಿ ಎಂದು ನುಡಿದರು.

ಹಿಂದೂ ವಿರೋಧಿ ದುಷ್ಟ ಕಾಂಗ್ರೆಸ್ ಸರಕಾರವನ್ನು ಎಚ್ಚರಿಸುವ ಸಮಾವೇಶ ಇದು ಎಂದು ತಿಳಿಸಿದರು. ಇಲ್ಲಿ ಸ್ವಾಭಿಮಾನಿ ಹಿಂದೂ ಕಾರ್ಯಕರ್ತರು ಬಂದಿದ್ದಾರೆ. ಯಾರನ್ನೂ ದುಡ್ಡು ಕೊಟ್ಟು ಕರೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದೂ ಕಾರ್ಯಕರ್ತರಿಗೆ ಅಪಮಾನ ಮಾಡುವ ದುಷ್ಟ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿದೆ ಎಂದು ಆರೋಪಿಸಿದರು.

ದುಷ್ಟ, ಹಿಂದೂ ವಿರೋಧಿ ಸರಕಾರಕ್ಕೆ ಪಾಠ ಕಲಿಸಲು ಈ ಕಾರ್ಯಕ್ರಮ ಎಂದು ವಿವರಿಸಿದರು. ಇದು ಜನವಿರೋಧಿ ಕಾಂಗ್ರೆಸ್ ಸರಕಾರ ಎಂದು ಆಕ್ಷೇಪಿಸಿದರು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಆದ ಬಳಿಕ ರಾಜ್ಯದ ಗೃಹ ಸಚಿವರು ಮಂಗಳೂರಿಗೆ ಬಂದಿದ್ದರು. ಆದರೆ, ಅವರನ್ನು ಸುಹಾಸ್ ಶೆಟ್ಟಿ ಮನೆಗೆ ಹೋಗಲು ಬಿಡಲಿಲ್ಲ ಎಂದು ಆರೋಪಿಸಿದರು.

ಧರ್ಮಸ್ಥಳ ವಿಚಾರದಲ್ಲಿ ಒಂದು ತಿಂಗಳಿನಿಂದ ದಿನನಿತ್ಯ ಅಪಪ್ರಚಾರ ನಡೆದಿದೆ. ರಾಜ್ಯ ಸರಕಾರ ಎಸ್‍ಐಟಿ ಮೂಲಕ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವ ನಿರೀಕ್ಷೆ ನಮ್ಮದಾಗಿತ್ತು. ಅದು ಈಡೇರಿಲ್ಲ ಎಂದು ದೂರಿದರು. ಧರ್ಮಸ್ಥಳದ್ದು ಸಣ್ಣ ದೇವಸ್ಥಾನವಲ್ಲ; ಕೋಟ್ಯಂತರ ಭಕ್ತರಿರುವ ಪವಿತ್ರ ಕ್ಷೇತ್ರ ಇದು. ಅಯೋಗ್ಯನ ಹಿನ್ನೆಲೆ ಅರ್ಥ ಮಾಡದೆ ಎಸ್‍ಐಟಿ ರಚಿಸಿದ ರಾಜ್ಯ ಸರಕಾರಕ್ಕೆ ಒಳ್ಳೆಯದು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಅಪಪ್ರಚಾರ ಮಾಡುವವರನ್ನು 24 ಗಂಟೆಯಲ್ಲಿ ಒದ್ದು ಒಳಗೆ ಹಾಕಬೇಕಿತ್ತು. ಆ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿಲ್ಲ ಎಂದು ಟೀಕಿಸಿದರು. ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ಘೋಷಣೆ ಮಾಡಿ ಎಂದು ಅವರು ಆಗ್ರಹಿಸಿದರು. ಆ ಕುಟುಂಬಕ್ಕೆ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಚಲೋ ಬಳಿಕ ಸೌಜನ್ಯ ಮನೆಗೆ ಭೇಟಿ ಕೊಟ್ಟ ಬಿವೈ ವಿಜಯೇಂದ್ರ