ಬೆಳ್ತಂಗಡಿ: ಧರ್ಮಸ್ಥಳದ ವಿರುದ್ಧದ ಷಡ್ಯಂತರ ನಡೆಯುತ್ತಿದೆ ಎಂದು ನಾವು ಹೇಳಿದ್ದು ಈಗ ನಿಜವಾಗಿದೆ. ದೂರುದಾರ ಮುಸುಕುದಾರಿಯ ಬಂಧನ ಸತ್ಯದ ಮೇಲೆ ಬೆಳಕು ಚೆಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಮಾಸ್ಕ್‌ಮ್ಯಾನ್ ಬಂಧನವಾಗುತ್ತಿದ್ದ ಹಾಗೇ ಅವರು ಪ್ರತಿಕ್ರಿಯಿಸಿದ್ದು, ಇದನ್ನು ಬಿಜೆಪಿ ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಕಪೋಲ ಕಲ್ಪಿತ ದೂರು ನೀಡಿ ಸಿಕ್ಕಿಬಿದ್ದಿರುವ ಈತನ ಹಿಂದಿರುವ ಶಕ್ತಿಗಳು ಯಾವುದು? ಷಡ್ಯಂತ್ರ ರೂಪಿಸಿದ ವಿಕೃತಿಗಳು ಯಾರು? ಇವರೆಲ್ಲರ ಮುಖವಾಡಗಳು ಬಯಲಾಗಬೇಕಿದೆ.
ಇಡೀ ರಾಜ್ಯದ ಹಾಗೂ ದೇಶದ ಗಮನವನ್ನು ಕೇಂದ್ರೀಕರಿಸುವಂತೆ ಮಾಡಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರ ಪವಿತ್ರ ಧರ್ಮಸ್ಥಳವನ್ನು ಅಪವಿತ್ರ ಗೊಳಿಸಲು ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ.
ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡ ಈ ಅಪಪ್ರಚಾರದ ಹಿಂದೆ ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ ತಳ್ಳಿಹಾಕಲಾಗದು. ಈ ಪ್ರಕರಣವನ್ನು ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರವೆಂದು ಸೀಮಿತಗೊಳಿಸದೆ, ಇದು ಭಾರತೀಯರ ಭಾವನೆಗಳು ಹಾಗೂ ಪರಂಪರೆಯ ಮೇಲೆ ನಡೆದ ವ್ಯವಸ್ಥಿತ ಪಿತೂರಿ ಎಂದು ಪರಿಗಣಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ಎಡ ಪಂಥೀಯರ ಒತ್ತಾಯಕ್ಕೆ ಮಣಿದು ಹೇಗೆ SIT ರಚಿಸಿ ತನಿಖೆ ನಡೆಸಿತೋ, ಅದೇ ಮಾದರಿಯಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧವೂ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಲಿ ಎಂದು ಆಗ್ರಹಿಸುತ್ತೇನೆ.