ನನಗೆ ಬಿಜೆಪಿ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ C.T. ರವಿ ಮತ್ತು ಅವರ ಪಟಾಲಂ ಷಡ್ಯಂತ್ರವೇ ಕಾರಣ ಎಂದು ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ M.P. ಕುಮಾರಸ್ವಾಮಿ ದೂರಿದ್ದಾರೆ. ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಕ್ಷದ ಕಚೇರಿಗೆ ರಾಜೀನಾಮೆ ಪತ್ರ ತಲುಪಿಸಿದ್ದೇನೆ. ಶಾಸಕ ಸ್ಥಾನದ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಫ್ಯಾಕ್ಸ್ ಕಳಿಸಿದ್ದೇನೆ ಎಂದು ತಿಳಿಸಿದರು. ಮತದಾರರು ಮತ್ತು ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸುತ್ತೇನೆ. C.T. ರವಿ ಅವರಿಗೆ ನಿಷ್ಠರಾಗಿ ಹೋಗಬೇಕು, ಅದು ನನ್ನಿಂದ ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಲು C.T. ರವಿ ಕಾರಣ ಆಗುತ್ತಾರೆ. ದೆಹಲಿಯಲ್ಲಿ ಶಾಸಕ C.T. ರವಿ ಕಣ್ಣಾಮುಚ್ಚಾಲೆ ಆಟ ಆಡಿದ್ದಾರೆ. ಹುಚ್ಚು ನಾಯಿ ಓಡಿಸುವ ರೀತಿಯಂತೆ ಅವರ ಜನಾಂಗದವರನ್ನು ನನ್ನ ವಿರುದ್ದ ಎತ್ತಿ ಕಟ್ಟಿ ಓಡಿಸಿದರು. ಕ್ಷೇತ್ರದ ಜನರು ಅವರಿಗೆ ಬುದ್ಧಿಕಲಿಸುತ್ತಾರೆ. ಜನರ ಸೇವೆ ಮಾಡುವ ಶಕ್ತಿ ಇನ್ನೂ ಇದೆ ನನಗೇನೂ ವಯಸ್ಸಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ, ಮೂಡಿಗೆರೆ ಕ್ಷೇತ್ರದಲ್ಲಿ ನಾನೇ ಮುಂದಿನ ಶಾಸಕ ಎಂದು ತಿಳಿಸಿದರು.