ಮದುವೆಯಾದರೆ ಬೇರೆ ಮನೆಗೆ ಹೋಗ್ಬೇಕು,ಜೊತೆಗೇ ಇರಲು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಅವಳಿಗಳು
ಹುಟ್ಟಿಗೂ ಮುಂಚಿನಿಂದಲೇ ಜೊತೆಯಿರುವ ತಮ್ಮ ಬಂಧ ಮುರಿಯುತ್ತದೆ ಎನ್ನುವುದರ ಬಗ್ಗೆ ತೀವ್ರವಾಗಿ ಆಲೋಚಿಸಿಬಿಟ್ಟಿದ್ದಾರೆ.
ಮಂಡ್ಯ: ಅವಳಿಗಳು ಸದಾ ಜೊತೆಗೇ ಇರಲು ಇಷ್ಟಪಡ್ತಾರೆ. ಅಮ್ಮನ ಹೊಟ್ಟೆಯಲ್ಲಿದ್ದಾಗಲೂ ಜೊತೆಗೇ ಇದ್ದ ಜೀವಗಳು ಭೂಮಿಗೆ ಬಿದ್ದ ಮೇಲೂ ಅಂಟಿಕೊಂಡೇ ಇರುವುದು ಅಪರೂಪವೇನಲ್ಲ. ಅದಕ್ಕೇ ಒಂದು ಅವಳಿಗೆ ಅನಾರೋಗ್ಯ ಉಂಟಾದ್ರೆ ಎರಡೂ ಮಕ್ಕಳಿಗೆ ಔಷಧ ಕುಡಿಸ್ತಾರೆ.. ಇನ್ನೊಂದು ಅವಳಿಗೆ ಖಂಡಿತಾ ಅದೇ ಸಮಸ್ಯೆ ಆಗುತ್ತೆ ಅನ್ನೋದು ಗೊತ್ತಿರೋದ್ರಿಂದ. ಬಹುಪಾಲು ಅವಳಿಗಳಿಗೆ ಜೀವನದುದ್ದಕ್ಕೂ ಇರೋ ತನ್ನದೇ ಮತ್ತೊಂದು ಭಾಗದಂತೆ ಇರುತ್ತಾರೆ. ಈ ಅನುಬಂಧ ಅದೆಷ್ಟು ಗಟ್ಟಿಯಾಗಿರುತ್ತದೆ ಎಂದರೆ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುವುದು ಅತಿ ವಿರಳ. ಒಂದೇ ಶಾಲೆಗೆ ಹೋಗೋದು, ಒಂದೇ ರೀತಿಯ ಬಟ್ಟೆ ಧರಿಸೋದು, ಒಂದೇ ಗುಂಪಿನಲ್ಲಿ ಇರೋದು ಹೀಗೇ ಜೊತೆಯಾಗಿ ಇರುತ್ತದೆ ಅವಳಿಗಳ ಬದುಕು.
ಈ ಬಂಧ ಕೆಲವೊಮ್ಮೆ ಗಾಬರಿ ಹುಟ್ಟಿಸುವಂಥಾ ಬೆಳವಣಿಗೆಗೂ ದಾರಿ ಮಾಡಿಕೊಡುತ್ತದೆ.ಈಗ ಮಂಡ್ಯದಲ್ಲಿ ಆಗಿರುವುದು ಇದೇ ಸನ್ನಿವೇಶ. ಶ್ರೀರಂಗಪಟ್ಟಣ ತಾಲೂಕಿನ ಹಣಸನಹಳ್ಳಿ ಗ್ರಾಮದ ಸುರೇಶ್ ಮತ್ತು ಯಶೋದ ದಂಪತಿಗೆ 19 ವರ್ಷದ ದೀಪಿಕಾ ಮತ್ತು ದಿವ್ಯಾ ಎನ್ನುವ ಅವಳಿ ಹೆಣ್ಣುಮಕ್ಕಳಿದ್ದರು. ಅನ್ಯೋನ್ಯವಾಗಿದ್ದ ಈ ಕುಟುಂಬಕ್ಕೆ ಅದ್ಯಾವ ಕೆಟ್ಟ ದೃಷ್ಟಿ ತಗುಲಿತೋ ಏನೋ ಒಂದು ವಿಷ ಘಳಿಗೆಯಲ್ಲಿ ಇಡೀ ಕುಟುಂಬ ಸಾಯುವವರಗೆ ಕೊರಗುವಂಥಾ ಘಟನೆ ನಡೆದೇಹೋಯ್ತು.
ಎಷ್ಟೇ ಜೊತೆಯಿದ್ದರೂ ಮದುವೆಯಾದ ನಂತರ ಅಕ್ಕ ತಂಗಿಯರು ತಂತಮ್ಮ ಗಂಡನ ಮನೆಗಳಿಗೆ ತೆರಳುತ್ತಾರೆ. ಅಪರೂಪಕ್ಕೆ ಅವಳಿಗಳಿಗೆ ಅವಳಿಗಳನ್ನೇ ಹುಡುಕಿ ಮದುವೆ ಮಾಡುತ್ತಾರೆ. ಆದ್ರೆ ಎಲ್ಲಾ ಅವಳಿಗಳಿಗೂ ಆ ಭಾಗ್ಯ ಇರೋದಿಲ್ಲ. ಅದೇನು ಆಲೋಚನೆ ಬಂತೋ, ಈ ಹುಡುಗಿಯರಿಬ್ಬರು ಅದೇನು ಚರ್ಚೆ ಮಾಡ್ಕೊಂಡ್ರೋ ಮದುವೆಯಾದ ನಂತರ ತಾವಿಬ್ಬರೂ ಬೇರೆಯಾಗಬೇಕಾಗುತ್ತದೆ. ಹುಟ್ಟಿಗೂ ಮುಂಚಿನಿಂದಲೇ ಜೊತೆಯಿರುವ ತಮ್ಮ ಬಂಧ ಮುರಿಯುತ್ತದೆ ಎನ್ನುವುದರ ಬಗ್ಗೆ ತೀವ್ರವಾಗಿ ಆಲೋಚಿಸಿಬಿಟ್ಟಿದ್ದಾರೆ. ಮದುವೆಯಾಗಿ ಬೇರೆಯಾಗುವುದನ್ನು ಇಷ್ಟಪಡದೇ ಇಬ್ಬರೂ ನೇಣಿಗೆ ಶರಣಾಗಿಬಿಟ್ಟಿದ್ದಾರೆ.