ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾಡುವ ರೈಲ್ವೇ ಪ್ರಯಾಣಿಕರಿಗೆ ಈಗ ಗುಡ್ ನ್ಯೂಸ್. ಈ ಮಾರ್ಗದಲ್ಲಿ ಹಗಲು ರೈಲು ಸಂಚಾರ ಮತ್ತೆ ಆರಂಭವಾಗುತ್ತಿದೆ.
ತಾಂತ್ರಿಕ ಕಾರಣಗಳಿಂದಾಗಿ ಕಡಲ ನಗರಿಗೆ ಹಗಲು ಹೊತ್ತು ಸಂಚರಿಸುತ್ತಿದ್ದ ರೈಲುಗಳನ್ನು ಕೆಲವು ದಿನಗಳ ಮಟ್ಟಿಗೆ ರದ್ದುಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಹಗಲು ರೈಲು ಪುನರಾರಂಭಗೊಳ್ಳುತ್ತಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಯಶವಂತಪುರ ಎಕ್ಸ್ ಪ್ರೆಸ್ ರೈಲು ಮತ್ತೆ ಹಗಲು ಸಂಚಾರ ಆರಂಭ ಮಾಡಲಿದೆ. ಡಿಸೆಂಬರ್ 16 ರಿಂದ ಹಗಲು ಸಂಚಾರ ಆರಂಭವಾಗಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 7 ಗಂಟೆಗೆ ಹೊರಟು ಸಂಜೆ 6.40 ಕ್ಕೆ ಮಂಗಳೂರು ತಲುಪುವ ರೈಲು ಇದಾಗಿದೆ. ಬೆಳಿಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30 ಕ್ಕೆ ಬೆಂಗಳೂರು ತಲುಪುವ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು ಮತ್ತು ಮಧ್ಯಾಹ್ನ 11.30 ಕ್ಕೆ ಹೊರಟು ರಾತ್ರಿ 8.45 ಕ್ಕೆ ಬೆಂಗಳೂರು ತಲುಪುವ ಹಗಲು ರೈಲು ಸಂಚಾರಕ್ಕೆ ಲಭ್ಯವಿರುತ್ತದೆ.
ಈಗಾಗಲೇ ಆನ್ ಲೈನ್ ಮತ್ತು ಆಫ್ ಲೈನ್ ಟಿಕೆಟ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕ ಬುಕಿಂಗ್ ಗೆ ಅವಕಾಶ ನೀಡಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವಾಗ ಪಶ್ಚಿಮ ಘಟ್ಟದ ಸಾಲಿನ ದೃಶ್ಯ ವೈಭವವನ್ನು ಸವಿಯುತ್ತಾ ತೆರಳುವವರಿಗೆ ಇದು ಗುಡ್ ನ್ಯೂಸ್.