Publish Date: Wed, 25 Jun 2025 (09:33 IST)
Updated Date: Wed, 25 Jun 2025 (09:35 IST)
ನವದೆಹಲಿ: ಕೊವಿಡ್ 19 ರ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ರೈಲ್ವೇ ಇಲಾಖೆ ರೈಲು ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದೆ. ಇದು ಯಾವಾಗಿನಿಂದ ಜಾರಿಯಾಗಲಿದೆ ಮತ್ತು ಎಷ್ಟು ಹೆಚ್ಚಳವಾಗಲಿದೆ ಇಲ್ಲಿದೆ ನೋಡಿ ವಿವರ.
ಜುಲೈ 1 ರಿಂದ ಹೊಸ ದರ ಜಾರಿಗೆ ಬರಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಕೆಲವು ವರ್ಷಗಳಿಂದ ರೈಲ್ವೇ ಟಿಕೆಟ್ ದರ ಏರಿಕೆಯಾಗಿರಲಿಲ್ಲ. ಅದರಲ್ಲೂ ಕೊರೋನಾ ಬಂದ ಬಳಿಕ ಹೆಚ್ಚಳ ಮಾಡಲಾಗಿರಲಿಲ್ಲ. ಆದರೆ ರೈಲ್ವೇ ಇಲಾಖೆಗೆ ಮತ್ತಷ್ಟು ಆದಾಯ ತಂದುಕೊಡುವ ನಿಟ್ಟಿನಲ್ಲಿ ಈಗ ಟಿಕೆಟ್ ದರ ಹೆಚ್ಚಳಕ್ಕೆ ಮುಂದಾಗಿದೆ.
ಮಾಹಿತಿಗಳ ಪ್ರಕಾರ ಸಾಮಾನ್ಯ ದರ್ಜೆಯ ಪ್ರಯಾಣಕ್ಕೆ ಪ್ರತೀ ಕಿ.ಮೀ.ಗೆ 1 ಪೈಸೆಯಂತೆ ಹೆಚ್ಚಳ ಮಾಡಲಾಗುತ್ತದೆ. ಇನ್ನು, ಎಸಿ ದರ್ಜೆಯ ಪ್ರಯಾಣಕ್ಕೆ ಪ್ರತೀ. ಕಿ.ಮೀ.ಗೆ 2 ಪೈಸೆಯಂತೆ ಹೆಚ್ಚಳವಾಗಲಿದೆ. ಗಮನಿಸಬೇಕಾದ ಅಂಶವೆಂದರೆ ಉಪನಗರ ಟಿಕೆಟ್ ಗಳು ಮತ್ತು 500 ಕಿ.ಮೀ. ದೂರದವರೆಗಿನ ದ್ವಿತೀಯ ದರ್ಜೆಯ ಪ್ರಯಾಣಕ್ಕೆ ಬೆಲೆ ಹೆಚ್ಚಳ ಅನ್ವಯಿಸಲ್ಲ. 500 ಕಿ.ಮೀ. ಗಿಂತ ಹೆಚ್ಚು ಪ್ರಯಾಣ ಮಾಡುವುದಾದರೆ ಪ್ರತೀ ಕಿ.ಮೀ.ಗೆ ಅರ್ಧ ಪೈಸೆಯಂತೆ ಹೆಚ್ಚಳವಾಗಲಿದೆ.
ಇನ್ನು, ಮಾಸಿಕ ಸೀಸನಲ್ ಟಿಕೆಟ್ ಗಳಿಗೆ ಈ ದರ ಹೆಚ್ಚಳ ಅನ್ವಯವಾಗುವುದಿಲ್ಲ. ಇದಲ್ಲದೆ ಜುಲೈ 1 ರಿಂದ ತತ್ಕಾಲ್ ಟಿಕೆಟ್ ಬುಕ್ ಮಾಡುವವರಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ತಿಳಿಸಿದೆ.