ಮೈಸೂರು: ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ದಾಳಿ ಮಾಡಿದವರು ಹುಡುಗರು, ಇದರಲ್ಲಿ ಪೊಲೀಸರದ್ದು ತಪ್ಪಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಮ್ ಯುವಕರು ಆರೋಪಿಯನ್ನು ಬಂಧಿಸಿಟ್ಟಿದ್ದ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲೆಸೆದು ದಾಂಧಲೆ ನಡೆಸಿದ್ದರು.
ಅಷ್ಟೇ ಅಲ್ಲದೆ ಪೊಲೀಸರಿಗೂ ಘಟನೆಯಲ್ಲಿ ಗಾಯಗಳಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಕೆಎನ್ ರಾಜಣ್ಣ ಪೊಲೀಸರ ಮೇಲೆ ಗೂಬೆ ಕೂರಿಸಿದ್ದರು. ಮುಸ್ಲಿಮರೇ ಹೆಚ್ಚು ಜನಸಂಖ್ಯೆಯಿರುವ ಉದಯಗಿರಿ ಪೊಲೀಸ್ ಠಾಣೆಯಲ್ಲೇ ಆರೋಪಿಯನ್ನು ಬಂಧಿಸಿಟ್ಟಿದ್ದು ಪೊಲೀಸರ ತಪ್ಪು ಎಂದಿದ್ದರು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಉಪಮುಖ್ಯಮಂತ್ರಿಯಾಗಿ ಹೇಳ್ತಿದ್ದೇನೆ. ಇದರಲ್ಲಿ ಪೊಲೀಸರ ತಪ್ಪಿಲ್ಲ. ದಾಂಧಲೆ ನಡೆಸಿದವರು 14-15 ವಯಸ್ಸಿನ ಹುಡುಗರು. ಅವರು ಯಾರೂ ಪೊಲೀಸರ ಮಾತು ಕೇಳಲಿಲ್ಲ. ಈಗ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.