ಬೆಂಗಳೂರು: ಮುಸ್ಲಿಮರ ಹೆಸರು ಬಂತು ಎಂದ ತಕ್ಷಣ ಬಿಜೆಪಿಯವರಿಗೆ ರಾಜಕೀಯ ಮಾಡುವುದೇ ಕೆಲಸ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ರೊಚ್ಚಿಗೆದ್ದ ಮುಸ್ಲಿಂ ಯುವಕರ ಗುಂಪು ಪೊಲೀಸ್ ಠಾಣೆಗೆ ಕಲ್ಲೆಸೆದು ದಾಂಧಲೆ ನಡೆಸಿದ್ದಾರೆ. ಇದರ ಬಗ್ಗೆ ಇಂದು ವಿಪಕ್ಷ ನಾಯಕ ಆರ್ ಅಶೋಕ್ ಇದೂ ಕೂಡಾ ಕಾಂಗ್ರೆಸ್ ನ ತುಷ್ಠೀಕರಣದ ಫಲ ಎಂದು ಟೀಕಿಸಿದ್ದರು. ಮುಸಲ್ಮಾನರನ್ನು ಓಲೈಸುವುದಕ್ಕೇ ಈ ರೀತಿ ಘಟನೆಗಳು ಪದೇ ಪದೇ ಆಗುತ್ತಿದೆ ಎಂದಿದ್ದರು.
ಈ ಬಗ್ಗೆ ಇಂದು ಗೃಹಸಚಿವ ಜಿ ಪರಮೇಶ್ವರ್ ಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯವರಿಗೆ ಬೇರೆ ಏನು ಕೆಲಸ ಇದೆ. ಮುಸಲ್ಮಾನರ ಹೆಸರು ಬಂತು ಎಂದ ತಕ್ಷಣ ತುಷ್ಠೀಕರಣ ಎಂದು ಬೇಳೆ ಬೇಯಿಸಿಕೊಳ್ಳುತ್ತಾರೆ. ಅವರಿಗೆ ಅದೇ ಅಲ್ವಾ ಅಜೆಂಡಾ ಎಂದಿದ್ದಾರೆ.
ಇನ್ನು ಮೈಸೂರು ಗಲಭೆ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹಸಚಿವರು ಹೇಳಿದ್ದಾರೆ. ಘಟನೆಗೆ ಕಾರಣರಾದವರು ಮತ್ತು ಕಲ್ಲು ತೂರಾಟ ನಡೆಸಿದವರ ವಿರುದ್ಧವೂ ಕ್ರಮವಾಗಲಿದೆ. ಒಂದು ವೇಳೆ ಪೊಲೀಸರು ತಪ್ಪು ಮಾಡಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.