ಬೆಂಗಳೂರು: ನನ್ನ ಬಗ್ಗೆ ಏನು ಬೇಕಾದರೂ ಹೇಳಲಿ, ನಮ್ಮ ತಂದೆ ಯಡಿಯೂರಪ್ಪನವರ ಬಗ್ಗೆ ಮಾತನಾಡಬೇಡಿ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧದ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಬಿವೈ ವಿಜಯೇಂದ್ರ ವಿರೋಧಿ ಬಣದವರಿಗೆ ಎಚ್ಚರಿಕೆ ನೀಡಿದ್ದಾರೆ. ಶ್ರೀರಾಮುಲು, ಯತ್ನಾಳ್ ಸೇರಿ ರೆಬೆಲ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿ ಶ್ರೀರಾಮುಲು ನಿನ್ನೆ ವಿಜಯೇಂದ್ರಗೆ ಹೆಚ್ಚು ಅನುಭವವಿಲ್ಲ ಎಂದಿದ್ದರು. ಅದಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, ರಾಜ್ಯದಲ್ಲಿ ನನ್ನ ಕಾರ್ಯವೈಖರಿ ಬಗ್ಗೆ ಕಾರ್ಯಕರ್ತರಲ್ಲಿ ಮೆಚ್ಚುಗೆಯಿದೆ. ಹೇಳಿಕೆ ಕೊಡುತ್ತಾ ಹೋದರೆ ನಾನೂ ಹೇಳುತ್ತಾ ಹೋಗಬಹುದು. ಆದರೆ ರಾಜ್ಯಾಧ್ಯಕ್ಷನಾಗಿ ನಾನು ಬಹಿರಂಗ ಹೇಳಿಕೆ ಕೊಡುತ್ತಾ ಹೋಗುವುದು ಸರಿಯಲ್ಲ ಎಂದು ಸುಮ್ಮನಿದ್ದೇನೆ.
ಹಿರಿಯ ನಾಯಕ ಶ್ರೀರಾಮುಲು ಅವರು ನಾನು ಹೊಸಬ ಎಂದಿದ್ದಾರೆ. ರಾಜ್ಯಾಧ್ಯಕ್ಷನಾಗಿ ನನಗೆ ಅನುಭವವಿಲ್ಲದೇ ಇರಬಹುದು. ಆದರೆ ಕಾರ್ಯಕರ್ತರಿಗೆ ನಂಬಿಕೆಯಿದೆ, ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿಯಿದೆ ಎಂದಿದ್ದಾರೆ.
ಒಂದು ದುಃಖದ ಸಂಗತಿ ಎಂದರೆ ವಿಜಯೇಂದ್ರ ಬಗ್ಗೆ ಏನು ಬೇಕಾದರೂ ಹೇಳಲಿ ಸಹಿಸಿಕೊಳ್ಳುತ್ತೇನೆ. ಆದರೆ ಪಕ್ಷ ಕಟ್ಟಿರುವ ಹೋರಾಟಗಾರ, ರೈತ ನಾಯಕ ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗಲೂ ಎಂಥಾ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನಿರುವುದೂ ಅಪರಾಧ. ಕಳೆದ ಒಂದು ವರ್ಷದಿಂದ ಯಡಿಯೂರಪ್ಪನವರಿಗೆ ಅವಮಾನ ಮಾಡುವ ಕೆಲಸ ಮಾಡಲಾಗುತ್ತಿದೆ. ಅಂತಹವರಿಗೆ ಯಾರೂ ಇಂತಹ ಹೇಳಿಕೆ ಕೊಡಬೇಡಿ ಎಂದು ಹೇಳುವವರಿಲ್ಲ ಎನ್ನುವುದೇ ದುರ್ದೈವ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.