Publish Date: Sat, 29 Nov 2025 (11:40 IST)
Updated Date: Sat, 29 Nov 2025 (11:43 IST)
ಬೆಂಗಳೂರು: ಇಂದು ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕುರ್ಚಿ ಕದನ ನಡೆಯುತ್ತಿರುವಾಗ ಹೈಕಮಾಂಡ್ ಅಣತಿ ಮೇರೆಗೆ ಇಬ್ಬರೂ ನಾಯಕರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದರು. ಮೀಟಿಂಗ್ ಬಳಿಕ ಡಿಕೆ ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಸಿಎಂ ಹೇಳಿಕೆಯನ್ನೇ ತಾವೂ ಅನುಸರಿಸಿದ್ದಾರೆ.
ತಮ್ಮೆಲ್ಲರ ಸಹಕಾರದಿಂದ ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೆದ್ದಿದ್ದೇವೆ. ಜನರಿಗೆ ಮಾತುಕೊಟ್ಟಂತೆ ಆಡಳಿತ ಮಾಡುತ್ತಿದ್ದೇವೆ. ಜನರ ಆಶೋತ್ತರಗಳನ್ನು ಈಡೇರಿಸಬೇಕಾದುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ.
ಹಿಂದೆ ಹೈಕಮಾಂಡ್ ನವರು ಏನು ತೀರ್ಮಾನ ಮಾಡಿದ್ದಾರೆ. ಆ ಪ್ರಕಾರ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. 8 ನೇ ತಾರಿಖಿನಂದು ಅಸೆಂಬ್ಲಿ ಶುರುವಾಗುತ್ತದೆ. ಅಲ್ಲಿ ವಿಪಕ್ಷಗಳ ವಿರುದ್ಧ ನಮ್ಮ ಕಾರ್ಯತಂತ್ರ ಹೇಗಿರಬೇಕು ಎನ್ನುವುದನ್ನು ಚರ್ಚೆ ಮಾಡಿದ್ದೇವೆ. ರಾಜಕೀಯವಾಗಿ ನಮ್ಮದು ಒಂದೇ ತೀರ್ಮಾನ. ಪಕ್ಷದ ವರಿಷ್ಠರು ಏನು ಹೇಳುತ್ತಾರೆ ಆ ರೀತಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅದರ ನಡುವೆ ನಮ್ಮದು ಯಾವುದೇ ಗುಂಪು ಇಲ್ಲ. ನನಗೆ ಗುಂಪುಗಾರಿಕೆಯ ಅವಶ್ಯಕತೆಯೂ ಇಲ್ಲ. ನಮ್ಮದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು.
ನಾವು ಒಟ್ಟಿಗೇ ಸೇರಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಹೈಕಮಾಂಡ್ ವಿರುದ್ಧ ಒಂದೇ ಒಂದು ಶಬ್ಧ ಕೂಡಾ ಮಾತನಾಡುವ ಕೆಲಸ ನಾನು ಮಾಡಲ್ಲ. ಮುಂದಿನ ಸಾರಿಯೂ ಸರ್ಕಾರ ತರಲು ಯೋಜನೆ ಹಾಕಿದ್ದೇವೆ. ಅದರ ಪ್ರಕಾರ ನಡೆದುಕೊಳ್ಳುತ್ತೇವೆ. ಸಿಎಂ ಹೇಳಿದ್ದಕ್ಕೆ ನನ್ನ ಸಹಮತವೂ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.