ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕುಸ್ತಿ ಕದನಕ್ಕೆ ಈಗ ತೇಪೆ ಹಚ್ಚುವ ಕೆಲಸಗಳು ಜೋರಾಗಿಯೇ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರನ್ನು ನಾಳೆ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಕರೆದಿರುವ ಡಿಕೆ ಶಿವಕುಮಾರ್ ಇದರ ಬಗ್ಗೆ ಕೇಳಿದ್ದಕ್ಕೆ ಏನು ಹೇಳಿದ್ದಾರೆ ಗೊತ್ತಾ?
ಮೊನ್ನೆಯಷ್ಟೇ ಸಿದ್ದರಾಮಯ್ಯ ನಿವಾಸದಲ್ಲಿ ಡಿಕೆ ಶಿವಕುಮಾರ್ ರನ್ನು ಆಹ್ವಾನಿಸಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಾಗಿದೆ. ಮೀಟಿಂಗ್ ಬಳಿಕ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. 2028 ಕ್ಕೂ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನಮ್ಮ ಕೆಲಸ. ಇದರ ಬಗ್ಗೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಅಷ್ಟೇ ಚರ್ಚೆ ಮಾಡಿದ್ದೇವೆ ಎಂದು ಇಬ್ಬರೂ ನಾಯಕರು ತೇಪೆ ಹಾಕಿದ್ದರು.
ಆದರೆ ಈಗ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಡಿಕೆಶಿ ಮನೆಯಲ್ಲಿ ನಡೆಯುತ್ತಿದೆ. ಹೀಗಾಗಿ ಎಲ್ಲವೂ ಸರಿ ಹೋಗಿದೆ ಎನ್ನುವುದೆಲ್ಲಾ ಸುಳ್ಳಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ.
ಅದು ನನಗೂ ಸಿಎಂಗೂ ಸಂಬಂಧಪಟ್ಟ ವಿಷಯ. ನಾವಿಬ್ಬರೂ ಬ್ರದರ್ಸ್ ಥರಾ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಿಮ್ಮ ಒತ್ತಡಕ್ಕಾಗಿ ನಾವು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದೆವು ಅಷ್ಟೇ. ನಮಗೆ ಇದರ ಅವಶ್ಯಕತೆಯೇ ಇರಲಿಲ್ಲ. ನೀವು ಹೇಳುತ್ತಿರುವ ಯಾವುದೇ ಗುಂಪೂ ನಮ್ಮಲ್ಲಿಲ್ಲ. ಪಕ್ಷ ಎಂದ ಮೇಲೆ ಎಲ್ಲವನ್ನೂ ಒಟ್ಟಾಗಿ ಮುನ್ನಡೆಸುತ್ತೇವೆ. ಈ ಬಗ್ಗೆ ನೀವು ಯಾರೂ ಚಿಂತೆ ಮಾಡಬೇಡಿ ಎಂದಿದ್ದಾರೆ.