Publish Date: Sat, 27 Jul 2024 (13:48 IST)
Updated Date: Sat, 27 Jul 2024 (13:49 IST)
ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿಕೊಂಡ ಕಾರಣಕ್ಕೆ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೇಕಾದರೆ ಬರೆದಿಟ್ಕೊಳ್ಳಿ, ಮುಂದಿನ ಸಲವೂ ನಾವೇ ಅಧಿಕಾರಕ್ಕೆ ಬರುವುದು ಎಂದಿದ್ದಾರೆ.
ರಾಮನಗರ ಹೆಸರು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಆದರೆ ಇದನ್ನು ವಿರೋಧಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮುಂದಿನ ಸಲ ನಾವು ಅಧಿಕಾರಕ್ಕೆ ಬಂದಾಗ ಮತ್ತೆ ರಾಮನಗರ ಎಂದು ಹೆಸರು ಬದಲಾವಣೆ ಮಾಡುತ್ತೇವೆ ಎಂದಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆಶಿ ಮುಂದಿನ ಸಲವೂ ನಾವೇ ಅಧಿಕಾರಕ್ಕೆ ಬರುವುದು ಎಂದಿದ್ದಾರೆ. ರಾಮನಗರ ಹೆಸರು ಬದಲಾವಣೆ ಮಾಡಿದವರು ಸರ್ವನಾಶವಾಗುತ್ತಾರೆ ಎಂದು ಕುಮಾರಸ್ವಾಮಿ ಶಾಪ ಹಾಕಿದ್ದರು. ಈಗ ಅದಕ್ಕೆ ತಿರುಗೇಟು ನೀಡಿರುವ ಡಿಕೆಶಿ ಎಷ್ಟು ಒಳ್ಳೆಯದು ಮಾಡಿದರೂ ನನಗೆ ಕೆಲವರು ಶಾಪ ಹಾಕುತ್ತಾರೆ ಎಂದಿದ್ದಾರೆ.
ಕೆಂಗಲ್ ಹನುಮಂತಯ್ಯ ಬೆಂಗಳೂರಿಗೆ ಬಂದು ವಿಧಾನ ಸೌಧ ಕಟ್ಟಿದ್ರು. ದೇವೇಗೌಡರು, ಕುಮಾರಸ್ವಾಮಿ ಬೆಂಗಳೂರಿಗೆ ಬಂದರು. ನಮ್ಮ ಹಿರಿಯರು ಇಟ್ಟಿದ್ದ ಹೆಸರು ಇರಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಹೆಸರು ಬದಲಾವಣೆ ಮಾಡಲಾಗಿದೆ. 2028 ಕ್ಕೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ, ಬರೆದಿಟ್ಕೊಳ್ಳಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ.