Publish Date: Mon, 25 Oct 2021 (17:46 IST)
Updated Date: Mon, 25 Oct 2021 (20:53 IST)
ಕಲಬುರಗಿ : ಗಂಡನ ಮನೆಯವರ ಕಿರುಕುಳ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಗರದಲ್ಲಿ ನಡೆದಿದೆ.
ಈ ದುರಂತದಲ್ಲಿ ತಾಯಿ ಮತ್ತು ಎರಡು ವರ್ಷದ ಮಗಳು ಮೃತಪಟ್ಟಿದ್ದರೆ, ಮೂರು ವರ್ಷದ ಬಾಲಕ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ದೀಕ್ಷಾ ವಸಂತಶರ್ಮಾ (26) ಮತ್ತು ಸಿಂಚನಾ (2) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಟ್ಟು ಗಾಯಗಳಿಂದ ಬಳಲುತ್ತಿರುವ ಬಾಲಕ ಧನಂಜಯ (3)ಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ಕಾಳಗಿ ತಾಲೂಕಿನ ದೀಕ್ಷಾ ಅವರನ್ನು ಇಲ್ಲಿನ ಪಂಚಶೀಲ ನಗರದ ವಸಂತ ಶರ್ಮಾಗೆ ಐದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ದೀಕ್ಷಾಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಮತ್ತು ತವರು ಮನೆಗೆ ಕಳುಹಿಸುತ್ತಿರಲಿಲ್ಲ ಎನ್ನಲಾಗಿದೆ.