ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನ ಕಗ್ಗಂಟು ಕೊನೆಗೂ ಬಿಡಿಸಿಕೊಂಡಿದೆ. ಇಲ್ಲಿ ಪಥಸಂಚಲನ ನಡೆಸಲು ಜಿಲ್ಲಾಡಳಿತ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ.
ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿಯಂತ್ರಣ ಹೇರಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಪರಿಣಾಮ ರಾಜ್ಯ ಸರ್ಕಾರ ಎಲ್ಲಾ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಪಡೆಯಬೇಕು ಎಂದು ಆದೇಶ ಹೊರಡಿಸಿತ್ತು.
ಇದರ ವಿರುದ್ಧ ಆರ್ ಎಸ್ಎಸ್ ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಇದೀಗ ಜಿಲ್ಲಾಡಳಿತ ಪಥಸಂಚಲನಕ್ಕೆ ಅನುಮತಿ ನೀಡಿರುವ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನೂ ವಿಧಿಸಿದೆ.
ಪಥಸಂಚಲನದಲ್ಲಿ ಕೇವಲ 325 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಿದೆ. ಈ ಪೈಕಿ 25 ಜನ ಬ್ಯಾಂಡ್ ವಾದಕರಿಗೆ ಅವಕಾಶ ನೀಡಿದೆ. ಹೀಗಾಗಿ 300 ಕಾರ್ಯಕರ್ತರಿಗೆ ಅವಕಾಶ ಸಿಗಲಿದೆ. ಮಧ್ಯಾಹ್ನ 3.30 ರಿಂದ ಸೂರ್ಯಾಸ್ತದವರೆಗೆ ಮಾತ್ರ ಪಥಸಂಚಲನ ಮಾಡಲು ಅವಕಾಶ ನೀಡಲಾಗಿದೆ. ಇದೀಗ ಅರ್ಜಿದಾರರರ ಮನವಿಯಂತೆ ನವಂಬರ್ 16 ರಂದು ಪಥಸಂಚಲನ ನಡೆಸಲು ಅನುಮತಿ ನೀಡಲಾಗಿದೆ.