ಬೆಂಗಳೂರು: ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ, ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಬಿಎಸ್ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಕೆಳ ನ್ಯಾಯಾಲಯ ಸಮನ್ಸ್ ಮಾಡಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಕೆಳ ಹಂತದ ನ್ಯಾಯಾಲಯ ಆರೋಪ ನಿಗದಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಹಿನ್ನೆಲೆ ಬಿಎಸ್‌ವೈ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಯಡಿಯೂರಪ್ಪ ಅರ್ಜಿಯನ್ನು ವಜಾಗೊಳಿಸಿ ಟ್ರಯಲ್‌ಗೆ ಅನುಮತಿ ನೀಡಿದೆ.
ಏನಿದು ಪ್ರಕರಣ:
ತಮ್ಮ ನಿವಾಸದಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಬಿಎಸ್‌ವೈ ವಿರುದ್ಧ ಕೇಳಿಬಂದಿತ್ತು, ಸಹಾಯ ಕೇಳಿ ಬಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಾರ್ಚ್ 2024 ರಲ್ಲಿ ಬಾಲಕಿಯ ತಾಯಿ ದೂರು ನೀಡಿದ್ದರು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ವರ್ಗಾವಣೆ ಮಾಡಿತ್ತು.
ಇನ್ನೂ ಪ್ರಕರಣ ಸಂಬಂಧ ಸಾಕ್ಷ್ಯ ನಾಶಪಡಿಸಿದ ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪಗಳ ಮೇಲೆ ಯಡಿಯೂರಪ್ಪ ಮತ್ತು ಅವರ ಮೂವರು ಸಹಾಯಕರ ವಿರುದ್ಧ ಜೂನ್ 2024 ರಲ್ಲಿ ಸಿಐಡಿ 750 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಈ ಪ್ರಕರಣದಲ್ಲಿ ದೂರು ನೀಡಿದ್ದ ಬಾಲಕಿಯ ತಾಯಿ ಮತ್ತು ಆ ಬಾಲಕಿ ಇಬ್ಬರೂ ಈಗಾಗಲೇ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಬಾಲಕಿಯ ತಾಯಿ ಮೇ 26, 2024 ರಂದು ಸಾವನ್ನಪ್ಪಿದ್ದಾರೆ.