Select Your Language

Notifications

webdunia
webdunia
webdunia
webdunia

ಆತುರ, ಕ್ರೆಡಿಟ್ ವಾರ್ ಗೆ 11 ಅಮಾಯಕರ ಬಲಿಯಾದ್ರು: ಸಿ.ಟಿ.ರವಿ

CT Ravi

Krishnaveni K

ಬೆಂಗಳೂರು , ಮಂಗಳವಾರ, 10 ಜೂನ್ 2025 (17:58 IST)
ಬೆಂಗಳೂರು: ಆರ್‍ಸಿಬಿ ವಿಜಯೋತ್ಸವಕ್ಕೆ ಆಗ ಯಾಕೆ ಆತುರ ತೋರಿದ್ದೀರಿ? ಅಂಥದ್ದು ಏನಿತ್ತು ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ಕಾಂಗ್ರೆಸ್ಸಿನವರೇ ಸಿಕ್ಸರ್, ಫೋರ್ ಬಡಿದು ಗೆಲ್ಲಿಸಿದಂತೆ ಅವರ ಆತುರ ಇತ್ತು ಎಂದು ಆಕ್ಷೇಪಿಸಿದರು. ಡಿ.ಕೆ.ಶಿವಕುಮಾರ್ ಬೌಲರ್, ಸಿದ್ದರಾಮಯ್ಯನವರೇ ಬ್ಯಾಟ್ಸ್‍ಮನ್, ಪರಮೇಶ್ವರ್ ವಿಕೆಟ್ ಕೀಪರ್ ಎಂಬಂತೆ ನಿಮ್ಮ ವರ್ತನೆ ಇತ್ತು ಎಂದು ವಾಗ್ದಾಳಿ ನಡೆಸಿದರು.

ಇಡೀ ಆರ್‍ಸಿಬಿ ತಂಡದ ಗೆಲುವಿಗೆ ನೀವೇ ಪಾತ್ರಧಾರಿಗಳೆಂಬಂತೆ ನಿಮ್ಮ ವ್ಯವಹಾರ ಇತ್ತು. ನಿಮ್ಮ ಆತುರ, ಕ್ರೆಡಿಟ್ ವಾರ್‍ನಿಂದ 11 ಅಮಾಯಕರು ಬಲಿಯಾಗಿದ್ದಾರೆ. ಈಗ ಕೋರ್ಟಿಗೆ 2 ತಿಂಗಳು ಬೇಕೆಂದು ಕೇಳುತ್ತಿರುವುದೇಕೆ ಎಂದು ಕೇಳಿದರು. ಮಾಹಿತಿಯನ್ನು ರಿ ರೈಟ್ ಮಾಡಬೇಕೇ? ಯಾವ ಕಾರಣಕ್ಕೆ 2 ತಿಂಗಳು ಕೇಳುತ್ತೀರಿ ಎಂದು ಪ್ರಶ್ನೆ ಮಾಡಿದರು. 2 ದಿನದಲ್ಲಿ ಕೊಡಿ ಎಂದು ನ್ಯಾಯಾಲಯ ಸರಿಯಾಗಿ ಹೇಳಿದೆ. ಎಲ್ಲವೂ ಸಿದ್ಧ ಇರುವಾಗ 2 ದಿನವೂ ಬೇಕಿರಲಿಲ್ಲ ಎಂದು ತಿಳಿಸಿದರು.
 
ಈಗ ಕೋರ್ಟಿಗೆ ಉತ್ತರ ನೀಡಲು 2 ತಿಂಗಳು ಕೇಳಿದ್ದು, ಜನಮಾನಸದಿಂದ ಮರೆಯಾಗಲಿ ಎಂಬ ಕಾರಣಕ್ಕೆ ಹೀಗೆ ಕೇಳಿದ್ದಾರಾ? ಜನರು ಮರೆತುಬಿಡಲೆಂದು 2 ತಿಂಗಳ ಸಮಯ ಕೇಳಿದಿರಾ? ಇಷ್ಟೇ ತಾಳ್ಮೆಯನ್ನು ಬಳಸಿ 2 ದಿನ ತೆಗೆದುಕೊಂಡಿದ್ದರೆ, ಕಾರ್ಯಕ್ರಮವೂ ಚೆನ್ನಾಗಿ ಆಗುತ್ತಿತ್ತು. ರಾಜ್ಯದ ಮರ್ಯಾದೆಯೂ ಉಳಿಯುತ್ತಿತ್ತು. 11 ಜನರ ಜೀವವೂ ಉಳಿಯುತ್ತಿತ್ತು ಎಂದು ನುಡಿದರು.
 
ಆರ್‍ಸಿಬಿ ಫ್ರಾಂಚೈಸಿ ಗೆದ್ದಿದ್ದಕ್ಕೆ ಕೆಲವೇ ಗಂಟೆಗಳಲ್ಲಿ ಮೈಮೇಲೆ ಬಿದ್ದು ನಾನು ಮುಂದೆ, ನಾನು ಮುಂದೆ ಎಂದು ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮ ಆಯೋಜಿಸಲು ಒಂದು ದಿನವೂ ಸಮಯ ತೆಗೆದುಕೊಂಡಿಲ್ಲ. 3ರಂದು ಕ್ರಿಕೆಟ್ ಮ್ಯಾಚ್ ಇತ್ತು. 4ರಂದು ವಿಜಯೋತ್ಸವ ಮಾಡಿದ್ದಾರೆ. ಆಗ ನೀವು 2 ಗಂಟೆ ಶಾಂತವಾಗಿ ಯೋಚಿಸಿದ್ದರೆ 11 ಅಮಾಯಕ ಯುವ ಪ್ರತಿಭೆಗಳ ಪ್ರಾಣ ಉಳಿಯುತ್ತಿತ್ತಲ್ಲವೇ ಎಂದು ಕೇಳಿದರು.
 
ಈಗ ಅಘೋಷಿತ ತುರ್ತು ಪರಿಸ್ಥಿತಿ
ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷವಾಗಿದೆ. ಆಗ ಪ್ರತಿಭಟಿಸುವ ಹಕ್ಕು ಇರಲಿಲ್ಲ. ಜೂನ್ 25ಕ್ಕೆ ತುರ್ತು ಪರಿಸ್ಥಿತಿಗೆ 50 ವರ್ಷವಾಗಲಿದೆ. ತುರ್ತು ಪರಿಸ್ಥಿತಿ ಗುಂಗಿನಲ್ಲೇ ರಾಜ್ಯದ ಕಾಂಗ್ರೆಸ್ ಇದ್ದಂತಿದೆ ಎಂದು ಸಿ.ಟಿ.ರವಿ ಅವರು ಹೇಳಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಆಗ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಚಳವಳಿ ಮಾಡುತ್ತಾರೆಂಬ ಬೆದರಿಕೆಗೆ ಕಾಂಗ್ರೆಸ್ ಭಯ ಬಿದ್ದಿದೆ. ಇನ್ನು ಜನರೇ ಬೀದಿಗೆ ಇಳಿದರೆ ಏನಾದೀತು ಎಂದು ಕೇಳಿದರು. ಕಾಂಗ್ರೆಸ್ ವೈಫಲ್ಯಕ್ಕೆ ಜನರು ನುಗ್ಗಿ ಬಡಿಯುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು.
 
ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಮುಡಾದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸ್ಪಷ್ಟ ಪುರಾವೆ ಜಾರಿ ನಿರ್ದೇಶನಾಲಯದ (ಇ.ಡಿ.) ಕೈಗೆ ಸಿಕ್ಕಿದೆ. ಈಗ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ? ಮುಡಾದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಾರಾ? ಅಥವಾ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡು ತಮ್ಮ ಜವಾಬ್ದಾರಿ ಹೊತ್ತುಕೊಳ್ಳುವರೇ ಎಂದು ಕೇಳಿದರು.

ಇ.ಡಿ. 99 ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರೆ, ಅಲ್ಲಿಗೆ ಭ್ರಷ್ಟಾಚಾರ ನಡೆದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿದೆ ಎಂದು ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಉಳಿದೆಲ್ಲರಿಗೂ ನೈತಿಕತೆಯ ಪಾಠ ಹೇಳುವ ಮುಖ್ಯಮಂತ್ರಿಗಳು ಈಗ ನೈತಿಕತೆಯ ಪಾಠವನ್ನು ತಮಗೂ ಅನ್ವುಯ ಮಾಡಿಕೊಳ್ಳಬೇಕಿದೆ ಎಂದು ಒತ್ತಾಯಿಸಿದರು. ಅಲ್ಲದೇ ತಪ್ಪಿತಸ್ಥರ ಮೇಲೆ ಕ್ರಮ ಆಗಲಿ ಎಂದು ಆಗ್ರಹಿಸಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

Tiger Attack: ಕೇರಳದಂತೆ ಚಾಮರಾಜನಗರದಲ್ಲೂ ನಡೆಯಿತು ದುರ್ಘಟನೆ