Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ಗೆ ಒಕ್ಕಲಿಗರು ಸೇರಿದಂತೆ ಎಲ್ಲ ವರ್ಗದ ಜನರ ಬೆಂಬಲವಿದೆ: ಡಿಸಿಎಂ ಶಿವಕುಮಾರ್

ಕಾಂಗ್ರೆಸ್‌ಗೆ ಒಕ್ಕಲಿಗರು ಸೇರಿದಂತೆ ಎಲ್ಲ ವರ್ಗದ ಜನರ ಬೆಂಬಲವಿದೆ: ಡಿಸಿಎಂ ಶಿವಕುಮಾರ್

Sampriya

ಬೆಂಗಳೂರು , ಗುರುವಾರ, 11 ಏಪ್ರಿಲ್ 2024 (15:33 IST)
ಬೆಂಗಳೂರು: ಕಾಂಗ್ರೆಸ್ ಪಕ್ಷ ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಜನರು ದಡ್ಡರಲ್ಲ, ತಮ್ಮ ಬದುಕು ಯಾರು ಕಟ್ಟಿಕೊಡುತ್ತಾರೋ ಅವರಿಗೆ ಬೆಂಬಲ ನೀಡುತ್ತಾರೆ. ಒಕ್ಕಲಿಗರೂ ಸೇರಿದಂತೆ ಎಲ್ಲಾ ವರ್ಗದ ಜನ ಕಾಂಗ್ರೆಸ್ ಗೆ ಬೆಂಬಲ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಿವಕುಮಾರ್, ವಿಧಾನಸಭೆ ಚುನಾವಣೆ ವೇಳೆ ಶೇ.5ರಷ್ಟು ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆ ವಾಲಿದ್ದವು. ಒಕ್ಕಲಿಗರ ಬೆಂಬಲದ ಕುರಿತು ಪ್ರತಿಕ್ರಿಯಿಸಿದ ಅವರು,  ಒಕ್ಕಲಿಗರಾಗಲಿ, ಬೇರೆ ಸಮುದಾಯದವರಾಗಲಿ ಯಾರೂ ದಡ್ಡರಲ್ಲ. ರಾಜ್ಯಕ್ಕೆ, ದೇಶಕ್ಕೆ ಯಾರು ಉತ್ತಮರು ಎಂದು ಜನ ಆಲೋಚನೆ ಮಾಡುತ್ತಾರೆ. ಜನ ಅವರ ಬದುಕು ನೋಡುತ್ತಾರೆ ಹೊರತು, ಭಾವನೆ ನೋಡುವುದಿಲ್ಲ ಎಂದರು.

ಸರ್ಕಾರ ಬೀಳಿಸಿದವರನ್ನೇ ಸ್ವಾಮೀಜಿಗಳ ಬಳಿ ಕರೆದುಕೊಂಡು ಹೋದರೆ ಸಮಾಜಕ್ಕೆ ಏನು ಉತ್ತರ ನೀಡುತ್ತಾರೆ? ಒಕ್ಕಲಿಗ ಸರ್ಕಾರ ಬೀಳಿಸಿದ ವಿಚಾರವಾಗಿ ಸ್ವಾಮೀಜಿ ಉತ್ತರ ಕೊಡಬೇಕು ಎಂಬ ಹೇಳಿಕೆ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ  'ಈ ವಿಚಾರವಾಗಿ ಸ್ವಾಮೀಜಿಗಳು ಉತ್ತರ ನೀಡಬೇಕು ಎಂದು ನಾನು ಕೇಳಿಲ್ಲ. ಕುಮಾರಸ್ವಾಮಿ ಹಾಗೂ ಕೆಲವು ಮಂತ್ರಿಗಳು ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವ ವೇಳೆಗೆ ಆಪರೇಷನ್ ಕಮಲ ನಡೆದಿತ್ತು. ಸ್ವಾಮೀಜಿಗಳಿಗೂ ಒಕ್ಕಲಿಗ ವ್ಯಕ್ತಿ ಸಿಎಂ ಆಗಿರುವ ಬಗ್ಗೆ ಅಭಿಮಾನ ಇರುತ್ತದೆ.  ಆದರೆ ಈಗ ಒಕ್ಕಲಿಗ ಸಿಎಂ ಅನ್ನು ತೆಗೆದವರನ್ನೇ ಜತೆಗೆ ಕರೆದುಕೊಂಡು ಹೋದರೆ ಹೇಗೆ? ಸ್ವಾಮೀಜಿಗಳ ಆಶೀರ್ವಾದ ಎಲ್ಲರಿಗೂ ಬೇಕು. ಹೀಗಾಗಿ ಚೆಲುವರಾಯಸ್ವಾಮಿ ಅವರು ನಮ್ಮ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿದ್ದರು. ಅದೇ ರೀತಿ ಇವರು ಕೂಡ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಕುಮಾರಸ್ವಾಮಿ, ಮಂಜುನಾಥ್ ಅವರು ಸ್ವಾಮೀಜಿಗಳ ಆಶೀರ್ವಾದ ಕೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಸರ್ಕಾರ ತೆಗೆದವರನ್ನೇ ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಅವರು ಸಮಾಜಕ್ಕೆ ಏನು ಉತ್ತರ ನೀಡುತ್ತಾರೆ ಎಂದಷ್ಟೇ ನಾನು ಕೇಳಿದೆ ಎಂದು ತಿಳಿಸಿದರು.

ಅವರೇ ಜೆಡಿಎಸ್ ಗೆ ಮುಕ್ತಿ ಕೊಟ್ಟಿದ್ದಾರೆ:

ಸ್ವಾಮೀಜಿಗಳು ಕೃಷ್ಣನಂತೆ ಅವರು ಪಾಂಡವರಂತೆ ಇರುವ ಜೆಡಿಎಸ್ ಪರವಾಗಿ ನಿಲ್ಲಲಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಜೆಡಿಎಸ್ ಎಲ್ಲಿದೆ? ಜೆಡಿಎಸ್ ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ನಾವು ಹಿಂದೆ ಒಂದು ತಪ್ಪು ಮಾಡಿದ್ದೆವು. ಆದರೆ ಈಗ ಅದಕ್ಕಿಂತ ದೊಡ್ಡ ತಪ್ಪು ಜೆಡಿಎಸ್ ನವರು ಮಾಡಿದ್ದಾರೆ' ಎಂದು ಲೇವಡಿ ಮಾಡಿದರು.

ನೀವಾಗಲಿ, ಕುಮಾರಸ್ವಾಮಿ ಅವರಾಗಲಿ ರಾಜಕಾರಣಕ್ಕೆ ಸ್ವಾಮೀಜಿಗಳನ್ನು ಯಾಕೆ ಎಳೆಯುತ್ತಿದ್ದೀರಿ ಎಂದು ಕೇಳಿದಾಗ, 'ನಾನು ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆಯುತ್ತಿಲ್ಲ. ಸ್ವಾಮೀಜಿಗಳಿಗೆ ಕೊಡಬೇಕಾದ ಗೌರವ ನಾವು ಕೊಡಬೇಕು ಎಂದು ಹೇಳುತ್ತಿದ್ದೇನೆ' ಎಂದು ತಿಳಿಸಿದರು.

ಸರ್ಕಾರವನ್ನು ಒಂದು ಜಾತಿಗೆ ಸೀಮಿತವಾಗಿಸುತ್ತಿರುವುದೇಕೆ ಎಂದು ಕೇಳಿದಾಗ, 'ನೀವು ನಾವು ಬೇಡ ಎಂದರೂ ಜಾತಿ ನಮ್ಮನ್ನು ಬಿಡುವುದಿಲ್ಲ. ನಾವು ಅರ್ಜಿ ಹಾಕಿ ಹುಟ್ಟದಿದ್ದರೂ ನಾವು ಸಾಯುವಾಗ ಧರ್ಮ, ಜಾತಿ ಬಂದೇ ಬರುತ್ತದೆ. ಧರ್ಮ ಬೇಡ ಎಂದರೂ ನಾಮಕರಣ ಹಾಗೂ ವಿವಿಧ ಕಾರ್ಯಗಳಲ್ಲಿ ಧರ್ಮ ಅಡಗಿದೆ' ಎಂದರು.

ಮೈತ್ರಿ ಸರ್ಕಾರ ಕೆಡವಲು ಶಾಸಕರನ್ನು ಬಿಜೆಪಿಗೆ ಕಳುಹಿಸಿದವರು ಯಾರು ಎಂಬ ಅಶ್ವತ್ಥ್ ನಾರಾಯಣ ಅವರ ಪ್ರಶ್ನೆಗೆ, 'ಯಾರು ಕಳುಹಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರೇ ಹೇಳಲಿ' ಎಂದು ತಿಳಿಸಿದರು.

ಮೋದಿಗೆ ತಮ್ಮ ಮೇಲೆ ವಿಶ್ವಾಸವಿಲ್ಲ:
ಕಾಂಗ್ರೆಸ್ ಪಕ್ಷದಲ್ಲಿ ನಂಬಿಕಸ್ಥ ನಾಯಕರಿಲ್ಲ ಹೀಗಾಗಿ ರಾಹುಲ್ ಗಾಂಧಿ ಹೆಸರಲ್ಲಿ ಮತ ಕೇಳುತ್ತಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, 'ಮೋದಿ ಅವರು ತಮ್ಮ ಹೆಸರೇಳಿ ಮತ ಕೇಳಲಿಲ್ಲ. ಶಿವಮೊಗ್ಗಕ್ಕೆ ಬಂದಿದ್ದ ಅವರು ಅಭ್ಯರ್ಥಿ ರಾಘವೇಂದ್ರ ಅವರಿಗೆ ಮತ ಕೊಡಿ ಎಂದು ಕೇಳಿದರೇ ಹೊರತು ತಮಗೆ ಕೊಡಿ ಎಂದು ಕೇಳಲೇ ಇಲ್ಲ. ಮೋದಿ ಅವರಿಗೆ ತಮ್ಮ ಮೇಲೆ ವಿಶ್ವಾಸವಿಲ್ಲ. ನಿಮಗೇನಾದರೂ ಅವರ ಪರವಾದ ಅಲೆ ಕಾಣುತ್ತಿದೆಯೇ?' ಎಂದು ಕೇಳಿದರು.

ಯಡಿಯೂರಪ್ಪ ಅವರು ಬರ ಪರಿಹಾರ, ತೆರಿಗೆ ಅನ್ಯಾಯದ ಬಗ್ಗೆ ಮಾತನಾಡಲಿ:
ಹೆಚ್ಎಎಲ್ ಮುಚ್ಚಲಾಗುತ್ತದೆ ಎಂದಿದ್ದ ರಾಹುಲ್ ಗಾಂಧಿ ಅವರಿಂದ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಕೇಳಿಸುತ್ತಾರಾ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಡಿಯೂರಪ್ಪ ಅವರು ವಿಷಯಾಂತರ ಮಾಡುವುದು ಬೇಡ. ಯಡಿಯೂರಪ್ಪ ಅವರು ಬರ ಪರಿಹಾರ ವಿಚಾರವಾಗಿ ನಿರ್ಮಲಾ ಸೀತರಾಮನ್ ಅವರ ಹೇಳಿಕೆ, ನಮ್ಮ ಬೇಡಿಕೆ, ನರೇಗಾ ಯೋಜನೆಯಲ್ಲಿ ಕೂಲಿ ದಿನಗಳ ಸಂಖ್ಯೆ ಹೆಚ್ಚಳ ಹಾಗೂ ನಮ್ಮ ತೆರಿಗೆ ಪಾಲಿನ ಬಗ್ಗೆ ಮಾತನಾಡಲಿ. ಹಾಗೂ ಯಡಿಯೂರಪ್ಪ ಅವರು ಯಾಕೆ ಕಣ್ಣೀರು ಹಾಕಿದರು” ಎಂದು ಹೇಳಿದರು.

ಕಾಂಗ್ರೆಸ್ ಗೆ ಹಾಕುವ ಮತ ಭಯೋತ್ಪಾದನೆಗೆ ಹಾಕುವ ಮತ ಎಂಬ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, 'ಚುನಾವಣಾ ಆಯೋಗ ಅದಕ್ಕೆ ಉತ್ತರ ನೀಡಲಿದೆ' ಎಂದು ತಿಳಿಸಿದರು.

ಎಸ್ ಟಿಎಸ್, ಹೆಬ್ಬಾರ್ ಬಿಜೆಪಿ ಶಾಸಕರು:
ಕಾಂಗ್ರೆಸಿಗರು ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡಿದ್ದಾರೆ ಎಂದು ಕೇಳಿದಾಗ, “ನಾನು ಅವರನ್ನು ಎಲ್ಲಿ ಸೇರಿಸಿಕೊಂಡಿದ್ದೇನೆ. ಅವರು ತಮ್ಮ ಕ್ಷೇತ್ರದ ವಿಚಾರವಾಗಿ ನಮ್ಮ ಜತೆ ಚರ್ಚೆ ಮಾಡಿದ್ದಾರೆ. ಆ ಕ್ಷೇತ್ರಕ್ಕೆ ಹೋಗಿ ಅಲ್ಲಿ ಕೇಳಿ. ಸೋಮಶೇಖರ್ ಹಾಗೂ ಹೆಬ್ಬಾರ್ ಅವರು ಬಿಜೆಪಿಯ ಅಧಿಕೃತ ಶಾಸಕರು. ಅವರು ತಮ್ಮದೇ ಆದ ಲೆಕ್ಕಾಚಾರ, ನಂಬಿಕೆ ಮೇಲೆ ಯಾವ ಪಕ್ಷಕ್ಕೆ ಸಹಾಯ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ” ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ಗೆ ಮತ ನೀಡಿದರೆ ದೇಶಕ್ಕೆ ಸುರಕ್ಷಿತವಲ್ಲ: ಆರ್‌.ಅಶೋಕ್ ವ್ಯಂಗ್ಯ