Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕತ್ವ ಇಲ್ಲ: ಯಡಿಯೂರಪ್ಪ

BS Yediyurappa

Krishnaveni K

ಬೆಂಗಳೂರು , ಗುರುವಾರ, 11 ಏಪ್ರಿಲ್ 2024 (14:41 IST)
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸಾರ್ಹ ನಾಯಕತ್ವ ಇಲ್ಲ; ಜೊತೆಗೆ ಸರಕಾರದ ಸಾಧನೆಯ ಬೆಂಬಲವೂ ಇಲ್ಲದೆ ಕೇವಲ ಕೇಂದ್ರ ಸರಕಾರದ ಅನುದಾನದ ಬಗ್ಗೆ ಜನರ ದಾರಿ ತಪ್ಪಿಸಿ, ವಿವಾದ ಸೃಷ್ಟಿಸಿ ತನ್ಮೂಲಕ ಜನರ ಬೆಂಬಲ ಗಳಿಸುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. 
 
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನರೇಂದ್ರ ಮೋದಿಯವರ ಸರಕಾರದ 10 ವರ್ಷಗಳ ಸಾಧನೆಯ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ; ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ. ರಾಹುಲ್ ಗಾಂಧಿಯವರ ನಾಯಕತ್ವ ಸಂಪೂರ್ಣವಾಗಿ ವಿಫಲವಾಗಿದ್ದು, ಯಾರೊಬ್ಬರೂ ಸಹ ರಾಹುಲ್ ಗಾಂಧಿಯವರ ಹೆಸರು ಹೇಳಲು ಸಿದ್ಧವಿಲ್ಲದ ಪರಿಸ್ಥಿತಿ ಇದೆ ಎಂದು ವಿಶ್ಲೇಷಿಸಿದರು.
 
2 ಕೋಟಿ ಉದ್ಯೋಗ ಕೊಟ್ಟಿದ್ದೀರಾ ಎಂದು ಕಾಂಗ್ರೆಸ್‍ನವರು ಪದೇಪದೇ ಪ್ರಶ್ನೆ ಮಾಡುತ್ತಾರೆ. 2014ರಲ್ಲಿ 15.54 ಕೋಟಿ ಭವಿಷ್ಯನಿಧಿ ಖಾತೆ ಇತ್ತು. 2022ರಲ್ಲಿ ಇದರ ಸಂಖ್ಯೆ 22.5 ಕೋಟಿ ದಾಟಿದೆ. 7 ಕೋಟಿ ಹೊಸ ಉದ್ಯೋಗ ಸೇರ್ಪಡೆಯಾಗಿದೆ. 2014ರಲ್ಲಿ ಎಂಎಸ್‍ಎಂಇಗಳಲ್ಲಿ 5 ಕೋಟಿ ಉದ್ಯೋಗ ನೀಡಿದ್ದವು. 2022ರಲ್ಲಿ ಅದರ ಸಂಖ್ಯೆ 6.3 ಕೋಟಿ ದಾಟಿದೆ.

ಬೆಂಗಳೂರಿನ ಎಚ್‍ಎಎಲ್ ಮುಚ್ಚುತ್ತಾರೆಂದು ಅಪಪ್ರಚಾರ ಮಾಡಿದರು. ಆದರೆ, ಇಂದು ಎಚ್‍ಎಎಲ್ 84 ಸಾವಿರ ಕೋಟಿ ಕಾರ್ಯಾದೇಶ ಪಡೆದಿದೆ. 50 ಸಾವಿರ ಕೋಟಿ ಕಾರ್ಯಾದೇಶ ಪಡೆಯಲು ಮಾತುಕತೆ ಹಂತದಲ್ಲಿದೆ ಎಂದು ವಿವರಿಸಿದರು. 23-24ರಲ್ಲಿ ದಾಖಲೆಯ 29 ಸಾವಿರ ಕೋಟಿ ಆದಾಯ ಗಳಿಸಿದೆ. ಎಚ್‍ಎಎಲ್ ಮುಚ್ಚುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದ ರಾಹುಲ್ ಗಾಂಧಿಯವರು ಕ್ಷಮೆ ಕೇಳುತ್ತಾರಾ? ಅವರ ಬಳಿ ಡಿಕೆಶಿಯವರು ಕ್ಷಮೆ ಕೇಳಿಸ್ತಾರಾ ಎಂದು ಪ್ರಶ್ನಿಸಿದರು.
 
ಒಂದೇ ಒಂದು ಉದ್ಯೋಗ ನೀಡದೆ ದಾಖಲೆ..
ಸಿದ್ದರಾಮಯ್ಯನವರ ಸರಕಾರ ಕಳೆದ 10 ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಎಂದು ಅವರು ಪ್ರಶ್ನಿಸಿದರು. ಕೇವಲ ಎಂ.ಬಿ.ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಎಕ್ಸ್ ಖಾತೆಯಲ್ಲಿ ಉದ್ದಿಮೆ ಸ್ಥಾಪನೆ ಆಗಿದೆ. ಕಳೆದ 10 ತಿಂಗಳಿನಲ್ಲಿ ಒಂದೇ ಒಂದು ಉದ್ಯೋಗ ನೀಡದೆ ದಾಖಲೆ ಮಾಡಿದ್ದು ಕಾಂಗ್ರೆಸ್ ಸರಕಾರದ ಸಾಧನೆ ಎಂದು ಯಡಿಯೂರಪ್ಪ ಅವರು ನುಡಿದರು.
 
ಮೂಲಭೂತ ಸೌಕರ್ಯದಲ್ಲಿ ಕಾಂಗ್ರೆಸ್ಸಿನ ಸಾಧನೆ ನಿರಾಶಾದಾಯಕ. ಯುಪಿಎ ತನ್ನ 10 ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಕೇವಲ 1,252 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದೆ. 2014ರಿಂದ 2024ರ ಅವಧಿಯಲ್ಲಿ ಬಿಜೆಪಿ ಸರಕಾರ ನಿರ್ಮಿಸಿದ ಒಟ್ಟು ಹೆದ್ದಾರಿ 3,234 ಕಿಮೀ ಎಂದು ದಾಖಲೆಗಳೊಂದಿಗೆ ವಿವರಿಸಿದರು.

ಕಲಬುರ್ಗಿ- ಬೀದರ್ ರೈಲು ಮಾರ್ಗ ಮೋದಿ ಸರಕಾರದ ಅವಧಿಯಲ್ಲಿ ಪೂರ್ಣಗೊಂಡಿದೆ. ಮಲ್ಲಿಕಾರ್ಜುನ ಖರ್ಗೆಯವರು ಸ್ವತಃ ರೈಲ್ವೆ ಸಚಿವರಾಗಿದ್ದರೂ ಅದನ್ನು ಪೂರ್ಣ ಮಾಡಲು ಆಗಿರಲಿಲ್ಲ ಎಂದು ತಿಳಿಸಿದರು. ಕರ್ನಾಟಕದ ಶೇ 95 ರೈಲು ಮಾರ್ಗಗಳ ವಿದ್ಯುದೀಕರಣವಾಗಿದೆ. ರೈಲ್ವೆ ಯೋಜನೆಯಲ್ಲಿ ಹಿಂದೆ ಬಿದ್ದಿದ್ದ ಕರ್ನಾಟಕವು ಈಗ ಭರದಿಂದ ಇತರ ರಾಜ್ಯಗಳ ಸಮನಾಗಿ ಅಭಿವೃದ್ಧಿ ಹೊಂದುತ್ತಿದೆ. ಇಂದು 6 ವಂದೇ ಭಾರತ್ ರೈಲುಗಳ ಸೇವೆ ರಾಜ್ಯದಲ್ಲಿ ದೊರಕುತ್ತಿದೆ. ರಾಜ್ಯದ 4 ಕೋಟಿ ಜನರಿಗೆ ಗರೀಬಿ ಕಲ್ಯಾಣ ಯೋಜನೆಯಡಿ ಉಚಿತ ಪಡಿತರವನ್ನು ಕಳೆದ 4 ವರ್ಷಗಳಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರಕಾರ ಆಶ್ವಾಸನೆ ನೀಡಿದ 10 ಕೆಜಿ ಅಕ್ಕಿಯಲ್ಲಿ ಒಂದು ಕಾಳು ಅಕ್ಕಿಯನ್ನೂ ನೀಡದೆ ಇರುವುದು ಅವರ ಸಾಧನೆ. ರಾಜ್ಯದ 54 ಲಕ್ಷ ರೈತರಿಗೆ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ವರ್ಷಕ್ಕೆ 6 ಸಾವಿರ ನೀಡಲಾಗುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ 4 ಸಾವಿರ ಸೇರಿಸಿ ಕೊಡುತ್ತಿದ್ದೆ. ಈಗ 4 ಸಾವಿರ ನಿಲ್ಲಿಸಿದ್ದು, ಈ ಸರಕಾರ ದಿವಾಳಿ ಆಗಿರುವುದನ್ನು ಸ್ಪಷ್ಟವಾಗಿ ಕಾಣುತ್ತಿದ್ದೇವೆ ಎಂದು ಹೇಳಿದರು.
 
ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಸ್ಥಾಪಿಸದ ಸಾಧನೆ..
ರಾಜ್ಯದಲ್ಲಿ ಕಳೆದ 10 ತಿಂಗಳಿನಲ್ಲಿ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಬಿಡಿ; ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಸ್ಥಾಪಿಸದೆ ಇರುವುದು ಸಿದ್ದರಾಮಯ್ಯನವರ ಸರಕಾರದ ಸಾಧನೆ ಎಂದು ಯಡಿಯೂರಪ್ಪ ಅವರು ಟೀಕಿಸಿದರು.

ಮೋದಿಯವರು ಒಂದು ಬಾರಿ ಗ್ಯಾರಂಟಿ ನೀಡಿದರೆ ಅದು ಅನುಷ್ಠಾನಕ್ಕೆ ಬಂದೇ ಬರುತ್ತದೆ. ಸುಳ್ಳು ಆಶ್ವಾಸನೆ ನೀಡುವ ಪ್ರಶ್ನೆಯೇ ಇಲ್ಲ ಎಂಬುದನ್ನು ದೇಶದ ಜನರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಗೆ ಕೊಡುವ ಮತ, ಅರಾಜಕತೆಗೆ, ಭ್ರಷ್ಟಾಚಾರದ ಪರ ಕೊಡುವ ಮತವಾಗಿ ಪರಿವರ್ತನೆ ಆಗಲಿದೆ. ಕಾಂಗ್ರೆಸ್ಸಿಗೆ ಕೊಡುವ ವೋಟ್ ದೇಶದ ಆರ್ಥಿಕ ದಿವಾಳಿತನಕ್ಕೆ ಹಾಗೂ ದೇಶದ ಅಭದ್ರತೆಗೆ ಕೊಡುವ ಮತವಾಗುತ್ತದೆ ಎಂದು ಎಚ್ಚರಿಸಿದರು.
 
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಡುವ ಮತವು ಆಂತರಿಕ ಸುರಕ್ಷತೆಗೆ ಅಪಾಯವನ್ನು ತಂದೊಡ್ಡಲಿದೆ. ಆದರೆ, ಮೋದಿಜಿ ಅವರ ನಾಯಕತ್ವ, ಗ್ಯಾರಂಟಿ, ಸದೃಢ ಸುರಕ್ಷಿತ ಭಾರತಕ್ಕೆ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಜನತೆ ಬಿಜೆಪಿ ಮತ್ತು ಎನ್‍ಡಿಎ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಭಜನೆಯ ಅಪಸ್ವರ ಎತ್ತಿದವರನ್ನು, ಜನರನ್ನು ಭಾಷೆ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಒಡೆಯುವ ಇಂಡಿ ಮೈತ್ರಿಕೂಟವನ್ನು ರಾಜ್ಯದ ದೇಶಭಕ್ತ ಜನತೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಮೋದಿಜೀ ಅವರ ಸರಕಾರವು ಮಹಿಳೆಯರಿಗೆ ಶೇ 33 ಮೀಸಲಾತಿಯನ್ನು ನೀಡಿದೆ. ಉಜ್ವಲ ಯೋಜನೆಯಡಿ ಮಹಿಳೆಯರಿಗೆ 10 ಕೋಟಿಗೂ ಹೆಚ್ಚು ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. ಜಲಜೀವನ್ ಮಿಷನ್‍ನಡಿ 14 ಕೋಟಿ ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು.

11.88 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಕೊಡಲಾಗಿದೆ. ನಾನು ಕೊಡುತ್ತಿದ್ದ 4 ಸಾವಿರ ಸ್ಥಗಿತಗೊಳಿಸಿದ್ದು, ಈ ಸರಕಾರ ದಿವಾಳಿ ಆಗಿದೆ ಎಂದು ಟೀಕಿಸಿದರು. ವಿಶ್ವದ 5ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಭಾರತ ಹೊರಹೊಮ್ಮಿದೆ. 25 ಕೋಟಿ ಜನರು ಬಡತನ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ ಎಂದು ಸಾಧನೆಗಳನ್ನು ವಿವರಿಸಿದರು ಹಾಗೂ ಮೋದಿಜೀ ಅವರಿಗೆ ಧನ್ಯವಾದ ಸಮರ್ಪಿಸಿದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂ. ಗ್ರಾಮಾಂತರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಡಿಕೆ ಬ್ರದರ್ಸ್‌ ವಿರುದ್ಧ ಬಿಜೆಪಿ ಕಿಡಿ