Select Your Language

Notifications

webdunia
webdunia
webdunia
webdunia

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಸಿಎಂ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Sampriya

ಬೆಂಗಳೂರು , ಬುಧವಾರ, 10 ಏಪ್ರಿಲ್ 2024 (20:33 IST)
Photo Courtesy X
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ವಿರುದ್ಧ ಕಾಂಗ್ರೆಸ್ ಪಕ್ಷವು ರಾಜ್ಯ ಚುನಾವಣಾ ಆಯೋಗಕ್ಕೆ ಇಂದು ದೂರನ್ನು ನೀಡಿದೆ.

ಚುನಾವಣಾ ಆಯೋಗದ ಕಚೇರಿ ಮುಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಅವರು, ಇಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ದೂರು ದಾಖಲಿಸಿದ್ದೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಎಲ್ಲಾ ಸಮುದಾಯ ಹಾಗೂ ವರ್ಗದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಎಲ್ಲಾ ನಾಯಕರು ಹಿಂದೂಗಳೇ. ಆದರೆ ಬಿಜೆಪಿ ನಾಯಕರಿಗೆ ನಕಲಿ ಖಾತೆಗಳ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರನ್ನು ಹಣಿಯುವ ಕಾಯಿಲೆ ಅಂಟು ರೋಗದಂತಿದೆ ಎಂದರು.

ಇಂದು ಬಿಜೆಪಿ ನಾಯಕರು ಕೆಲವು ನಕಲಿ ಖಾತೆ ಹಾಗೂ ಬಿಜೆಪಿಯ ಕೆಲವು ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಿದ್ದರಾಮಯ್ಯ ಅವರು ಹಿಂದೂಗಳ ಮತ ಬೇಡ ಎಂದು ಹೇಳಿದ್ದಾರೆಂಬ ಸುಳ್ಳು ಸುದ್ದಿ ಸೃಷ್ಟಿ ಮಾಡಿ ಪ್ರಕಟಿಸಿದ್ದಾರೆ. ಬಿಜೆಪಿಗೆ ಸಂಬಂಧಿಸಿದ ಖಾತೆಗಳ ಮೂಲಕವೇ ಈ ಸುಳ್ಳು ಸುದ್ದಿ ಹರಡಿದೆ. ಇದರ ಮೂಲ ಹುಡುಕಿದಾಗ ತುಮಕೂರಿನ ಗೂಳೂರು ಕೇಂದ್ರದಿಂದ ಹರಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಎಲ್ಲೊ ಕೂತುಕೊಂಡು ಸುಳ್ಳು ಸುದ್ದಿ ಹರಡುವುದು ಬಿಜೆಪಿಯ ಜಾಯಮಾನವಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಹಾಗೂ ವಿರೋಧ ಪಕ್ಷದ ನಾಯಕ ಅಶೋಕ್ ಅವರ ಕೈವಾಡ ಇದೆ ಎಂದು ನಾವು ಭಾವಿಸುತ್ತೇವೆ. ಇವರ ವಿರುದ್ಧ ನೀತಿ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಐಪಿಸಿ, ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ.

ಇಂತಹ ಸುಳ್ಳುಸುದ್ದಿ ತಡೆಯದಿದ್ದರೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎಲ್ಲಾ ವರ್ಗದವರನ್ನು ಒಟ್ಟಾಗಿ ಕರೆದೊಯ್ಯುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಯೋಜನೆಗಳು ಎಲ್ಲಾ ವರ್ಗದವರಿಗೆ ಅನ್ವಯವಾಗುವಂತೆ ಇವೆ. ನಮ್ಮ ಸರ್ಕಾರದ ಪ್ರಗತಿ ಸಹಿಸಲಾಗದೆ ಬಿಜೆಪಿ ನಾಯಕರು ಸುಳ್ಳು ಸುದ್ದಿ ಹರಡುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ನಂತರ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡಿಲ್ಲ. ಕೇವಲ ಕಾಂಗ್ರೆಸ್ ಮಾತ್ರ ಸಾಮಾಜಿಕ ನ್ಯಾಯದ ಸಿದ್ಧಾಂತದ ಮೇಲೆ ಕೆಲಸ ಮಾಡಿಕೊಂಡು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ವೋಟ್ ಬೇಡ ಎಂದು ಸುಳ್ಳು ಸುದ್ದಿ: ಚುನಾವಣಾ ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ದೂರು