ವಿಜಯಪುರ: ವಕ್ಫ್ ಬೋರ್ಡ್ ರೈತರ ಜಮೀನಿಗೆ ನೋಟಿಸ್ ನೀಡಿರುವುದು ಈಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿಯ ಗುದ್ದಾಟಕ್ಕೆ ಮತ್ತೊಂದು ಕಾರಣವಾಗಿಬಿಟ್ಟಿದೆ.
ವಿಜಯಪುರದಲ್ಲಿ 15 ಸಾವಿರ ಎಕರೆ ಭೂ ಪ್ರದೇಶವನ್ನು ತನ್ನದು ಎಂದು ವಕ್ಫ್ ಬೋರ್ಡ್ ಹೇಳಿಕೊಳ್ಳುತ್ತಿದೆ. ನೂರಾರು ರೈತರಿಗೆ ಭೂ ಒತ್ತುವರಿ ಮಾಡಲು ನೋಟಿಸ್ ನೀಡಿದೆ ಎಂದು ಬಿಜೆಪಿ ಹೇಳುತ್ತಿದೆ. ಈ ಸಂಬಂಧ ಈಗಾಗಲೇ ಒಂದು ಸುತ್ತಿನ ಪ್ರತಿಭಟನೆ ನಡೆದಿದೆ. ಇದೀಗ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.
ಒಂದೆಡೆ ಬಿಜೆಪಿ ಇದನ್ನೇ ಅಸ್ತ್ರವಾಗಿರಿಸಿರುವುದನ್ನು ಮನಗಂಡಿರುವ ಸರ್ಕಾರ ಈಗ ಜಿಲ್ಲಾಧಿಕಾರಿಗಳ ಮಟ್ಟದ ನೇತೃತ್ವದ ಸಮಿತಿಯೊಂದನ್ನು ರಚಿಸಿ ಎಷ್ಟು ಜಮೀನುಗಳಿಗೆ ನೋಟಿಸ್ ಹೋಗಿದೆ, ವಾಸ್ತವ ಸ್ಥಿತಿ ಏನು ಎಂಬುದನ್ನು ತಿಳಿಯಲು ಹೊರಟಿದೆ. ಈಗಾಗಲೇ ಸಚಿವ ಎಂಬಿ ಪಾಟೀಲ್ ಟಾಸ್ಕ್ ಫೋರ್ಸ್ ನಿರ್ಮಿಸುವುದಾಗಿ ಹೇಳಿದ್ದರು. ಅದರಂತೆ ಈಗ ಟಾಸ್ಕ್ ಫೋರ್ಸ್ ರಚಿಸಲಾಗಿದೆ.
ಇನ್ನೊಂದೆಡೆ ಬಿಜೆಪಿ ಕೂಡಾ ತನ್ನದೇ ಶಾಸಕರು, ಸಂಸದರ ನಿಯೋಗವನ್ನು ನಾಳೆ ವಿಜಯಪುರಕ್ಕೆ ಕಳುಹಿಸಿಕೊಡಲಿದೆ. ಬಿಜೆಪಿಯ ಸತ್ಯ ಶೋಧನಾ ಸಮಿತಿ ವಿಜಯಪುರದ ಎಷ್ಟು ರೈತರಿಗೆ ನೋಟಿಸ್ ನೀಡಲಾಗಿದೆ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಹೊರಟಿದೆ. ಇದಾದ ಬಳಿಕ ರಾಜ್ಯಾದ್ಯಂತ ಹೋರಾಟ ನಡೆಸಲು ಮುಂದಾಗಿದೆ.